​ಗುಡಿಸಾಗರ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ: ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ

Spread the love

ನವಲಗುಂದ: ತಾಲೂಕಿನ ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ, 7ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಹಾಗೂ ಮಹಾಸರಸ್ವತಿ ಪೂಜೆ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುಗಿದವು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ವೀರಣ್ಣ ಗುಳೇದ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುವ ಮುಖಂಡ ಫಕ್ಕೀರೇಶ ಪಡೇಸೂರ ಅವರು ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಭಾರತದ ಸತ್ಪ್ರಜೆಗಳು. ವಿದ್ಯಾರ್ಥಿಗಳು ಶಿಸ್ತು ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಆ ಮೂಲಕ ತಮ್ಮ ಶಾಲೆ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.

​ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ವಾರ್ಷಿಕ ವರದಿ ಮಂಡಿಸಿದರು. ಎಸ್‌ ಜಿ ಗೋಣಸಂಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ವರ್ಗಾವಣೆಗೊಂಡು ತೆರಳಿದ್ದ ಶಿಕ್ಷಕ ಸುರೇಶ ಭಜಂತ್ರಿ ಅವರಿಗೆ ಆತ್ಮೀಯವಾಗಿ ಸತ್ಕರಿಸಲಾಯಿತು. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ ದಾನಿ ಚಿದಾನಂದ ಮುತ್ತಣ್ಣವರ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ವಿವಿಧ ಮನೋರಂಜನಾ ಕಲೆ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.

​ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನವ್ವ ಗುಡಸಲಮನಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಯಶೋದಾ ಪಡೇಸೂರ, ಸದಸ್ಯರಾದ ನಿಜಗುಣಿ ಗಾಡದ, ರವಿ ಹಳ್ಯಾಳ, ಮಿನಾಕ್ಷಿ ಬಾಗೂರ, ಸಿಆರ್‌ಪಿ ಶ್ರೀನಿವಾಸ ಅಮಾತ್ತೇಣವರ ಉಪಸ್ಥಿತರಿದ್ದರು. ಗ್ರಾಮದ ಹಿರಿಯರಾದ ಭೀಮಣ್ಣ ಪಟ್ಟೇದ, ಗಿರೀಶ ದೇವರಡ್ಡಿ, ದ್ಯಾಮನಗೌಡ ಅಯ್ಯನಗೌಡರ, ಬಾಬುಗೌಡ ಕುಲಕರ್ಣಿ, ಕರಿಯಪ್ಪ ಗಡಾದ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಎಸ್‌ ಎಂ ತಳವಾರ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಮತಿ ಎಸ್ ಡಿ ದೊಡ್ಡಬಸನಗೌಡ್ರ ವಂದಿಸಿದರು.

Leave a Reply

Your email address will not be published. Required fields are marked *