ಏಕಾಏಕಿ ಶಿಕ್ಷಕನ ವಜಾ: ಕುಮಾರಪಟ್ಟಣದ ಆದಿತ್ಯ ಸ್ಕೂಲ್ ಎದುರು ಪ್ರತಿಭಟನೆ

Spread the love

ರಾಣೇಬೆನ್ನೂರ: ತಾಲ್ಲೂಕಿನ ಕುಮಾರಪಟ್ಟಣದ ಆದಿತ್ಯ ಸ್ಕೂಲ್‌ನಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಹಾಗೂ ಕಚೇರಿ ಆಡಳಿತಾಧಿಕಾರಿ ಶಶಿಧರ ಶಿಗ್ಲಿ ಅವರನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದನ್ನು ಖಂಡಿಸಿ, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸಂಬಳ ಹೆಚ್ಚಳ ಕೇಳಿದ್ದಕ್ಕೆ ವಜಾ ಆರೋಪ:

ಪ್ರತಿಭಟನೆಯಲ್ಲಿ ಮಾತನಾಡಿದ ಶಿಕ್ಷಕ ಶಶಿಧರ ಶಿಗ್ಲಿ, “ನಾನು 1997ರಿಂದ ಈ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. 28 ವರ್ಷಗಳ ಸೇವೆಯ ನಂತರವೂ ಸಂಸ್ಥೆಯು ನನಗೆ ಕೇವಲ 28 ಸಾವಿರ ರೂಪಾಯಿ ಸಂಬಳ ನೀಡುತ್ತಿದೆ. ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ನನಗೆ 55 ಸಾವಿರ ರೂಪಾಯಿ ಸಂಬಳ ನೀಡಬೇಕು. ಈ ಬಗ್ಗೆ ನಾನು ಸಂಬಳ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದೆ. ಆದರೆ, ನ್ಯಾಯಯುತವಾಗಿ ಸಂಬಳ ಕೇಳಿದ್ದಕ್ಕೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಕೆಲಸದಿಂದ ತೆಗೆದುಹಾಕಿದ್ದಾರೆ” ಎಂದು ಅಳಲು ತೋಡಿಕೊಂಡರು.

​ಸಂಸ್ಥೆಯ ಈ ಕ್ರಮವು ಅನ್ಯಾಯವಾಗಿದ್ದು, ತಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಅವರು ಪಟ್ಟುಹಿಡಿದರು.

ಅಧಿಕಾರಿಗಳ ಭರವಸೆ:

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಶಾಲೆಯ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಮುಂದಿನ ಒಂದು ವಾರದೊಳಗೆ ಶಿಕ್ಷಣ ಸಂಸ್ಥೆಯ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಈ ಭರವಸೆಯ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು.

​ಈ ಸಂದರ್ಭದಲ್ಲಿ ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ, ಹನುಮಂತಪ್ಪ ದಿವಗಿಹಳ್ಳಿ, ಚಂದ್ರಶೇಖರ ಕುದರಿಹಾಳ, ಶಿವಾನಂದ ಕೆಳಗಿನಮನಿ, ಬಸವಣೆಪ್ಪ ಹೊನ್ನಕ್ಕಳವರ, ಶೈಲಮ್ಮ ಹರನಗಿರಿ, ಪರಮೇಶಪ್ಪ ಚಿನ್ನಣ್ಣನವರ, ಬಸವರಾಜ ಲಗಿಬಗಿ, ಚಂದ್ರು ಸಣ್ಣಪ್ಪನವರ, ಸಿದ್ದಪ್ಪ ಕೋಡೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಶಿಕ್ಷಕನ ಹೋರಾಟಕ್ಕೆ ಬೆಂಬಲ ಸೂಚಿಸಿದರು.

Leave a Reply

Your email address will not be published. Required fields are marked *