
ನವಲಗುಂದ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ 10 ವರ್ಷಗಳ ಸಾಧನೆ ಗೈದ ನಾಗನೂರು ಗ್ರಾಮದ ಶಾರದಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಗತಿಪರ ರೈತ ಶೌಕತ್ತಲಿ ಲಂಬೂನವರ ಅಭಿಪ್ರಾಯಪಟ್ಟರು.
ತಾಲೂಕಿನ ನಾಗನೂರು ಗ್ರಾಮದ ಶಾರದಾ ಆಂಗ್ಲ ಮಾಧ್ಯಮ ಶಾಲೆಯ 10ನೇ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ದೂರದ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೋಗುವಂತಹ ಸಂದರ್ಭಗಳು ಇರುತ್ತಿದ್ದವು. ಈ ಸಮಸ್ಯೆಯನ್ನು ಅರಿತ ಡಾ. ಮಹೇಶ ಹಿರೇಮಠ ಅವರು ಗ್ರಾಮೀಣ ಭಾಗದಲ್ಲಿಯೇ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣದ ಜೊತೆಗೆ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಡಾ. ಮಹೇಶ ಹಿರೇಮಠ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಅವರು ಪ್ರಶಂಸಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಮಹೇಶ ಹಿರೇಮಠ ಮಾತನಾಡಿ, ಸಂಸ್ಥೆಯು ನುರಿತ ಶಿಕ್ಷಕವೃಂದವನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರಂತರ ಶ್ರಮವಹಿಸುತ್ತಿದೆ. ಆರಂಭದಿಂದಲೂ ಗ್ರಾಮೀಣ ಭಾಗದ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಯ ಆಯ್ದ ಪ್ರತಿಭಾವಂತರನ್ನು ಗುರುತಿಸಿ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು. ಎಲ್ಲ ಪಾಲಕರ ಸಹಕಾರದಿಂದ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನವ್ವ ಗುಡಸಲಮನಿ, ಅಮೃತರಾವ್ ಕುಲಕರ್ಣಿ, ಸರೋಜಾ ಹೊಳೆಯಣ್ಣವರ, ಸೌಮ್ಯಾ ಚವಡಿ, ಜಗದೀಶ್ ಹಿರೇಮಠ, ಶಾಲಾ ಮುಖ್ಯೋದ್ಯಾಪಕಿ ಪುಷ್ಪಾ ಹಿರೇಮಠ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

