
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಜಿಲ್ಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫೆಬ್ರವರಿ 22 ರಂದು ಕರ್ನಾಟಕ ಕಾಲೇಜು (ಕೆ.ಸಿ.ಡಿ) ಆವರಣದಲ್ಲಿ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ, ಪೆಟ್ ಫ್ಯಾಶನ್ ಶೋ ಹಾಗೂ ಬೀದಿ ಶ್ವಾನ ಮರಿಗಳನ್ನು ದತ್ತು ಪಡೆಯುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಇಂದು ಬೆಳಿಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕ ಹಾಗೂ ಇತರೆ ಪ್ರಾಣಿ ದಯಾ ಸಂಘಗಳು ಮತ್ತು ಎನ್.ಜಿ.ಓ.ಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಮಟ್ಟದ ಈ ಶ್ವಾನ ಪ್ರದರ್ಶನದಲ್ಲಿ ವಿವಿಧ ಆಕರ್ಷಕ ಶ್ವಾನ ತಳಿಗಳು ಭಾಗವಹಿಸಲಿದ್ದು, ಅವುಗಳನ್ನು ತಳಿ ಹಾಗೂ ಲಿಂಗವಾರು ವರ್ಗೀಕರಿಸಿ ಉತ್ತಮ ಶ್ವಾನಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಈ ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಶ್ವಾನ ಮಾಲೀಕರು ಫೆಬ್ರವರಿ 20ರ ಸಂಜೆ 5 ಗಂಟೆಯೊಳಗೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರನ್ನು ಅಥವಾ ಮೊಬೈಲ್ ಸಂಖ್ಯೆ 9845459130, 9900470554, 9449930268 ಸಂಪರ್ಕಿಸಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು.

ಶ್ವಾನಗಳ ಮಾಲೀಕರು ಹಾಗೂ ಶ್ವಾನ ಪಾಲನೆಯಲ್ಲಿ ಆಸಕ್ತಿ ಇರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದ್ದಾರೆ.
ಮುಖ್ಯವಾಗಿ ಬೀದಿ ಶ್ವಾನ ಮರಿಗಳನ್ನು ದತ್ತು ಪಡೆಯಲು ಇಚ್ಛಿಸುವವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು https://scan.page/75SeGI ಲಿಂಕ್ ಬಳಸಿ ಅಥವಾ ಮೊಬೈಲ್ ಸಂಖ್ಯೆ 7022298763 ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದು.
ದತ್ತು ಪಡೆಯುವ ಎಲ್ಲಾ ನಾಯಿಮರಿಗಳಿಗೆ ಹುಚ್ಚು ನಾಯಿ ರೋಗ ಸೇರಿದಂತೆ ವಿವಿಧ ಕಾಯಿಲೆಗಳ ವಿರುದ್ಧ ಉಚಿತ ಲಸಿಕೆ ಹಾಕಿ ಕೊಡಲಾಗುವುದು. ಅದರೊಂದಿಗೆ ಜಂತುನಾಶಕ ಔಷಧ ಹಾಗೂ ಇತರೆ ಪರಿಕರಗಳನ್ನು ನೀಡುವುದರ ಜೊತೆಗೆ ನಾಯಿ ಸಾಕಾಣಿಕೆಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು.
ಅಲ್ಲದೆ, ದತ್ತು ಪಡೆಯುವ ಶ್ವಾನಗಳಿಗೆ ಒಂದು ವರ್ಷದ ಒಳಗಾಗಿ ಪಶುಪಾಲನಾ ಇಲಾಖೆ ಅಥವಾ ಎಚ್.ಡಿ.ಎಂ.ಸಿ ಸಹಯೋಗದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ಭುವನೇಶ ಪಾಟೀಲ ಅವರು ಮಾಹಿತಿ ನೀಡಿದರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಅವರು ಸಭೆಯನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಭೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ರಮೇಶ ಹೆಬ್ಬಳ್ಳಿ, ಡಾ. ಬಿ.ಪಿ. ಹಿರೇಮಠ, ಡಾ. ಲಿಂಗರಾಜ ಪಿ.ಎಸ್., ಹ್ಯೂಮೇನ್ ವರ್ಡ್ ಫಾರ್ ಎನಿಮಲ್ಸ್ ಸಂಸ್ಥೆಯ ರಮೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.

