
ಧಾರವಾಡ: ಇಲ್ಲಿನ ಹೈಕೋರ್ಟ್ ಪೀಠಕ್ಕೆ ಇಂದು ಮಧ್ಯಾಹ್ನ 1:30ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಅಪರಿಚಿತರಿಂದ ಇ-ಮೇಲ್ ಬಂದಿದ್ದು, ಇಡೀ ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ತಕ್ಷಣದ ಪೊಲೀಸ್ ಕಾರ್ಯಾಚರಣೆ:
ಇ-ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ತಕ್ಷಣವೇ ಹೈಕೋರ್ಟ್ ಆವರಣಕ್ಕೆ ಧಾವಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೈಕೋರ್ಟ್‌ನ ಎಲ್ಲಾ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಗಳನ್ನು ಸದ್ಯಕ್ಕೆ ಕಟ್ಟಡದಿಂದ ಹೊರಗೆ ಕಳುಹಿಸಲಾಗಿದೆ.
ಶ್ವೇತದಳ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ:
ಸ್ಥಳಕ್ಕೆ ಆಗಮಿಸಿರುವ ಶ್ವಾನ ದಳ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ತಜ್ಞರು ಇಡೀ ನ್ಯಾಯಾಲಯದ ಸಂಕೀರ್ಣವನ್ನು ಕೂಲಂಕಷವಾಗಿ ತಪಾಸಣೆ ನಡೆಸುತ್ತಿದ್ದಾರೆ. ಕಟ್ಟಡದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಬಾಂಬ್ ಬೆದರಿಕೆ ಇ-ಮೇಲ್ ಮೂಲದ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಬೇರೆ ಯಾವುದಾದರೂ ಸಂಚೇ ಎಂಬುದು ತಪಾಸಣೆಯ ನಂತರವಷ್ಟೇ ತಿಳಿದುಬರಬೇಕಿದೆ.

