ಧಾರವಾಡ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಹಾಗೂ ಪರೀಕ್ಷಾ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ‘ಜ್ಞಾನ ಸಿಂಚನ’ ಎಂಬ ವಿಶೇಷ ನೇರ ಫೋನ್-ಇನ್ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಫೆಬ್ರವರಿ 16 ರಿಂದ ಫೆಬ್ರವರಿ 25 ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ವಿಷಯ ತಜ್ಞರೊಂದಿಗೆ ನೇರವಾಗಿ ಮಾತನಾಡಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಫೆಬ್ರವರಿ 16, 18, 20, 23 ಮತ್ತು 25 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ನೇರ ಫೋನ್-ಇನ್ ಕಾರ್ಯಕ್ರಮ ಜರುಗಲಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಬೇಕು. ಪರೀಕ್ಷಾ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳು ಈ ಸುವರ್ಣಾವಕಾಶದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಸಾಧಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯ ಮೂಲಕ ಕೋರಿದ್ದಾರೆ.

