​ಕಂಚಾರಗಟ್ಟಿ ಸರ್ಕಾರಿ ಉರ್ದು ಶಾಲೆಗೆ ಶಾಸಕ ರುದ್ರಪ್ಪ ಲಮಾಣಿ ಅವರಿಂದ ಎರಡು ಹೊಸ ಕೊಠಡಿಗಳ ಕೊಡುಗೆ: ಸುವರ್ಣ ಮಹೋತ್ಸವ ಸಡಗರ

Spread the love

ಹಾವೇರಿ: ತಾಲೂಕಿನ ಕಂಚಾರಗಟ್ಟಿ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ಈ ಐತಿಹಾಸಿಕ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ವಿಧಾನಸಭೆಯ ಉಪಸಭಾಪತಿಗಳು ಹಾಗೂ ಹಾವೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರು ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೊಸದಾಗಿ ಎರಡು ಶಾಲಾ ಕೊಠಡಿಗಳನ್ನು ಮಂಜೂರು ಮಾಡಿರುವುದಾಗಿ ಘೋಷಿಸಿ ಗ್ರಾಮಸ್ಥರ ಹರ್ಷಕ್ಕೆ ಕಾರಣರಾದರು.

​ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಅಬ್ದುಲ್ ಸಾಬ್ ನದಾಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಶಾಸಕರು ಶಾಲೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ಕೈಗೊಂಡ ಈ ನಿರ್ಧಾರವನ್ನು ಶಾಲಾ ಮಂಡಳಿ ಮತ್ತು ಶಿಕ್ಷಕ ವೃಂದ ಮುಕ್ತಕಂಠದಿಂದ ಶ್ಲಾಘಿಸಿತು. ಶಾಲೆಯ ಶೈಕ್ಷಣಿಕ ಪ್ರಗತಿಗೆ ಶಾಸಕರು ನೀಡುತ್ತಿರುವ ಸ್ಪಂದನೆಗೆ ಎಸ್‌ಡಿಎಂಸಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಹೃತೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.

​ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ಪರಿಸರ ಪ್ರೇಮಿ ಶ್ರೀ ಯಾಸೀನ್ ಅಬ್ದುಲ್ ಸಾಬ್ ಮುಜಾವರ್ ಸೇರಿದಂತೆ ಊರಿನ ಎಲ್ಲಾ ಗುರುಹಿರಿಯರು, ಪೋಷಕರು ಮತ್ತು ಶಿಕ್ಷಣ ಇಲಾಖೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಾಲೆಯ ಐವತ್ತು ವರ್ಷಗಳ ಸಾರ್ಥಕ ಪಯಣದ ನೆನಪಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಗೆದ್ದವು. ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಶಾಲೆಯ ವಾರ್ಷಿಕೋತ್ಸವವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *