
ರಾಣೇಬೆನ್ನೂರ : ತಾಲೂಕಿನ ಕಾಕೋಳ ಗ್ರಾಮದಲ್ಲಿ ರವಿವಾರದಂದು ಗುರುವಿನ ಮೇಲಿನ ಅಪ್ರತಿಮ ಭಕ್ತಿ ಹಾಗೂ ಗೆಳೆಯರೊಂದಿಗಿನ ಬಾಂಧವ್ಯದ ಅಪರೂಪದ ಸಂಗಮವೊಂದು ಸಾಕ್ಷಿಯಾಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2000-01ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶ್ರೀ ಬೀರೇಶ್ವರ ಪ್ರೌಢ ಶಾಲೆಯ 2003-04ನೇ ಸಾಲಿನ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ‘ಗುರುವಂದನಾ ಮತ್ತು ಸ್ನೇಹ ಸಮ್ಮಿಲನ’ ಕಾರ್ಯಕ್ರಮವು ಶ್ರೀ ಬೀರೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ, ಅಂದು ಅಕ್ಷರ ಕಲಿಸಿದ ಗುರುಗಳನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಹೂವು ಹಾಗೂ ವಾದ್ಯಮೇಳಗಳ ಅದ್ಧೂರಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ನೆಚ್ಚಿನ ಶಿಕ್ಷಕರನ್ನು ಮೆರವಣಿಗೆಯ ಮೂಲಕ ಕರೆತಂದ ರೀತಿ ಗ್ರಾಮಸ್ಥರ ಗಮನ ಸೆಳೆಯಿತು. ತದನಂತರ ಶ್ರೀ ಬೀರೇಶ್ವರ ಪ್ರೌಢ ಶಾಲಾ ಆವರಣದ ವೇದಿಕೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಎಲ್ಲ ಗುರುಗಳನ್ನು ಸನ್ಮಾನಿಸಿ, ಹಳೆ ವಿದ್ಯಾರ್ಥಿಗಳು ಗುರುಗಳ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಸಮಾಜಮುಖಿ ಸೇವೆಯ ಭಾಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಒಟ್ಟು 20ಕ್ಕೂ ಹೆಚ್ಚು ಜನ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ಕಲ್ಪಿಸಿದರು.

ನಂತರ ಶಿಕ್ಷಕರಾದ ಗುಡ್ಡಪ್ಪ ಹಿತ್ತಲಮನಿ, ಅವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿರುವುದು ನಮ್ಮ ಪುಣ್ಯ. ಈ ಬ್ಯಾಂಚಿನ ವಿದ್ಯಾರ್ಥಿಗಳು ಕೃಷಿ, ಭಾರತೀಯ ಸೇನೆ, ಉನ್ನತ ಶಿಕ್ಷಣ, ರೈಲ್ವೆ, ಪೊಲೀಸ್, ಅಬಕಾರಿ ಇಲಾಖೆ, ವೈದ್ಯಕೀಯ, ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರ ಸೇರಿದಂತೆ ದೇಶದ ವಿವಿಧ ಉನ್ನತ ಸ್ತರಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ನಾವು ಕಲಿಸಿದ ಪಾಠಕ್ಕೆ ಸಿಕ್ಕ ಸಾರ್ಥಕತೆ ಎಂದು ಶ್ಲಾಘಿಸಿದರು. ಅಲ್ಲದೆ, ಮೆರವಣಿಗೆಯ ಮೂಲಕ ಶಿಕ್ಷಕರನ್ನು ಗೌರವಿಸಿ ವಿದ್ಯಾರ್ಥಿಗಳು ತಮ್ಮ ಋಣ ತೀರಿಸಿಕೊಂಡಿದ್ದಾರೆ. ಇಂದಿನ ವಿದ್ಯಾರ್ಥಿಗಳು ಇವರ ಸಾಧನೆಯನ್ನು ಮಾದರಿಯಾಗಿಟ್ಟುಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳಲಿ ಎಂದು ಆಶಿಸಿದರು.

ಶಿಕ್ಷಕ ಎಸ್. ಟಿ. ಬಾತಿ ಅವರು ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬಂತೆ ವಿದ್ಯಾರ್ಥಿಗಳು ತೋರಿಸಿದ ಗೌರವ ಅಭಿನಂದನೀಯ. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗದೆ ಓದಿನತ್ತ ಗಮನಹರಿಸಬೇಕು ಮತ್ತು ತಂದೆ-ತಾಯಿಗಳನ್ನು ಗೌರವಿಸುವ ಸತ್ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ಮತ್ತೊಬ್ಬ ಶಿಕ್ಷಕ ಎಂ. ಎಂ. ಮಕರಿ ಅವರು ಮಾತನಾಡಿ, ಶಿಷ್ಯರ ಈ ಪ್ರೀತಿ ಕಂಡರೆ ನನಗೆ ಹಸಿವನ್ನೇ ಮರೆತುಹೋಗಿದೆ. ನನ್ನ 25 ವರ್ಷಗಳ ಸೇವೆಯಲ್ಲಿ ಇಂತಹ ಶಿಷ್ಯ ಬಳಗವನ್ನು ಹಾಗೂ ಗೌರವವನ್ನು ಹಿಂದೆಂದೂ ಕಂಡಿಲ್ಲ. ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ವ್ಯತ್ಯಾಸವಿದ್ದರೂ, ಶಿಕ್ಷಕರಿಗೆ ಇಂದಿಗೂ ಇಷ್ಟೊಂದು ಗೌರವ ಸಿಗುತ್ತಿರುವುದು ನಮ್ಮ ಪುಣ್ಯ ಎಂದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಜಿ. ಎಸ್. ಬಡಿಗೇರ ಅವರು, ಹಳೆ ವಿದ್ಯಾರ್ಥಿಗಳು ಎಂದರೆ ಶಾಲೆಯ ಕೇವಲ ದಾಖಲೆ ಪುಸ್ತಕದಲ್ಲಿರುವ ಹೆಸರುಗಳಲ್ಲ, ಅವರು ನಮ್ಮ ಶಾಲೆಯ ಶಾಶ್ವತ ಆಸ್ತಿಗಳು. ಕಲ್ಲಿನಂತಿದ್ದ ಮಣ್ಣನ್ನು ಸುಂದರ ಪ್ರತಿಮೆಯನ್ನಾಗಿ ಮಾಡಲು ಶಿಕ್ಷಕರು ಪಟ್ಟ ಶ್ರಮಕ್ಕೆ ಇಂದು ನೀವು ನೀಡುತ್ತಿರುವ ಗೌರವವೇ ನಿಜವಾದ ಪ್ರತಿಫಲ.ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ. ಎಂ. ಮಕರಿ, ಎಫ್. ಎನ್. ಕರೇಗೌಡ್ರ, ಆರ್. ಎ. ಹುಲ್ಮನಿ, ಆರ್. ಎ. ಮಾಳದಕರ, ಎಸ್. ಸಿ. ಬಡಿಗೇರ, ಜೆ. ಆರ್. ಚಿಕ್ಕೆರೂರ, ಎನ್. ಪಿ. ಉದಾಸಿಮಠ, ಜಿ. ಕೆ. ಹಿತ್ತಲಮನಿ, ಎಸ್. ಟಿ. ಬಾತಿ, ಆರ್. ಡಿ. ಗೋಡಿಹಾಳ, ಎನ್. ಎಂ. ಕರಬಣ್ಣನವರ, ಎಚ್. ಎಂ. ಬಾರ್ಕಿ, ಆರ್. ಜಿ. ಕಚ್ಚರವಿ, ಕೆ. ಎಚ್. ಹಡಗಲಿ, ಶೇಖರ ಚವ್ಹಾಣ, ಗೌರಮ್ಮ ಶಿವಣ್ಣನವರ, ಜೆ. ಎಫ್. ಬಳ್ಳಾರಿ, ರೇಖಾ ಸುಣಗಾರ, ಜಯಶ್ರೀ ಗೌರಪ್ಪನವರ, ಪ್ರಕಾಶ ಆರ್ ಹೊಸಳ್ಳಿ, ಎಸ್ ಕೆ ದೇವರಹಳ್ಳಿ ಡಿ ಎಪ್ ಮಾದರ ಹಾಗೂ ದಿವಂಗತ ಎಂ. ಎಫ್. ಸಂಜೀವಣ್ಣನವರ ಮತ್ತು ದಿವಂಗತ ಜಿ. ಎಫ್. ಅಂಚೇರ ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ದೇಶ ಕಾಯುವ ಯೋಧ ಮಿತ್ರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಗುತ್ತೆಪ್ಪ ಬಿ. ಎಚ್., ನಾಗಪ್ಪ ಲಮಾಣಿ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಶಿಕ್ಷಕ ವೃಂದದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ಡಾ: ಮಹೇಶ ಬಾರ್ಕಿ, ದಯಾನಂದ ಜಾಧವ್, ಮಾಲತೇಶ ಲಮಾಣಿ, ಬಸವರಾಜ ಹೆಗಡೆ, ಬಸವರಾಜ ಕೆಂಗೋಡ, ದುರ್ಗಮ್ಮ ಹಳ್ಳಳ್ಳಿ, ಶಿವಮ್ಮ ಸೂರಣಗಿ ಅವರು ತಮ್ಮ ಹಳೆಯ ಆಟೋಟದ, ವಿವಿದ ವಿಷಗಳ ಕುರಿತು ಮಾಹಿತಿ ಹಂಚಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ಮಾಜಿ ಗ್ರಾ. ಪಂ. ಅಧ್ಯಕ್ಷೆ ಶಾಂತಮ್ಮ ರುದ್ರಪ್ಪ ಕಿವುಡನವರ ವಹಿಸಿದ್ದರು. ಸಮಾರಂಭದಲ್ಲಿ ಕಾಕೋಳ ಸೇರಿದಂತೆ ವೆಂಕಟಾಪುರ, ಬುಡಪನಹಳ್ಳಿ, ಛತ್ರ ಗ್ರಾಮಗಳ ಪಂಚಾಯತಿ ಮಾಜಿ ಅಧ್ಯಕ್ಷರುಗಳು, ಸದಸ್ಯರು, ಶಾಲಾ ಆಡಳಿತ ಮಂಡಳಿ, ಎಸ್ಡಿಎಂಸಿ ಪದಾಧಿಕಾರಿಗಳು ಬಿಸಿಎಮ್ ನಿಲಯ ಪಾಲಕ ಮಹೇಶಕುಮಾರ ಲಮಾಣಿ, ಹಾಗೂ ಗ್ರಾಮದ ಸಮಸ್ತ ಗುರು-ಹಿರಿಯರು ಮತ್ತು ನೂರಾರು ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಭೆಯಲ್ಲಿ ಹೆಳೆಯ ವಿಧ್ಯಾರ್ಥಿ ಡಾ:ಮಹೇಶ ಬಾರ್ಕಿ ನಿರೂಪಿಸಿದರು. ಮಾಲತೇಶ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹೆಗಡೆ ಸ್ವಾಗತಿಸಿದರು. ಗಿರೀಶ ಘಾಟಗೆ ವಂದಿಸಿದರು

