ರೋಣ ಬಳಿ ಭೀಕರ ಅಪಘಾತ: ಮೂವರು ಮಹಿಳಾ ಕೃಷಿ ಕಾರ್ಮಿಕರ ದುರ್ಮರಣ, 15ಕ್ಕೂ ಹೆಚ್ಚು ಜನರಿಗೆ ಗಾಯ

Spread the love

ರೋಣ: ತಾಲ್ಲೂಕಿನ ಜಿಗಳೂರ ಕ್ರಾಸ್ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳಾ ಕೃಷಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, 15ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿರುವ ಹೃದಯವಿದ್ರಾಹಕ ಘಟನೆ ನಡೆದಿದೆ. ಟಾಟಾ ಕ್ಯಾಂಟರ್ ಗೂಡ್ಸ್ ವಾಹನ ಮತ್ತು ಪ್ಯಾಸೆಂಜರ್ ಕ್ರೂಸರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಈ ದುರಂತಕ್ಕೆ ಕಾರಣವಾಗಿದೆ.

​ಗಜೇಂದ್ರಗಡ ಪಟ್ಟಣದ ಶಿವಾಜಿ ಪೇಟೆಯ ನಿವಾಸಿಗಳಾದ ಮರಿಯಂಬು ದಾದೇಸಾಬ್ ಹುನಗುಂದ (55), ಅನ್ನಪೂರ್ಣ ಲಕ್ಷ್ಮಣ ಚಂಗಳಿ (45) ಹಾಗೂ ಸುಜಾತಾ ರಾಜಪ್ಪ ಹೊಸಮನಿ (30) ಮೃತಪಟ್ಟ ದುರ್ದೈವಿಗಳು. ಮೃತರೆಲ್ಲರೂ ಕೃಷಿ ಕೂಲಿ ಕಾರ್ಮಿಕರಾಗಿದ್ದು, ಕೆಲಸದ ನಿಮಿತ್ತ ಗಜೇಂದ್ರಗಡದಿಂದ ರೋಣ ಪಟ್ಟಣದ ಕಡೆಗೆ ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ವಾಹನಗಳು ನಜ್ಜುಗುಜ್ಜಾಗಿದ್ದು, ಕಿರುಚಾಟದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಗಾಯಾಳುಗಳ ರಕ್ಷಣೆಗೆ ಮುಂದಾದರು.

​ಈ ಘಟನೆಯಲ್ಲಿ ಹದಿನೈದಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ರೋಣ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ರೋಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದುಡಿಯುವ ಕೈಗಳೇ ಬಲಿಯಾದ ಈ ಘಟನೆಯಿಂದ ಗಜೇಂದ್ರಗಡದ ಶಿವಾಜಿ ಪೇಟೆಯಲ್ಲಿ ಶೋಕಸಾಗರ ಮುಳುಗಿದೆ.

Leave a Reply

Your email address will not be published. Required fields are marked *