ಬಾಲ್ಯ ವಿವಾಹ ತಡೆಗೆ ಕಲ್ಯಾಣ ಮಂಟಪಗಳ ಮಾಲೀಕರು ಸಹಕರಿಸಿ: ಧಾರವಾಡದಲ್ಲಿ ತರಬೇತಿ ಕಾರ್ಯಾಗಾರ

Spread the love

ಧಾರವಾಡ: ಬಾಲ್ಯ ವಿವಾಹ ಮುಕ್ತ ಭಾರತವನ್ನು ರೂಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ 100 ದಿನಗಳ ಜನಜಾಗೃತಿ ಅಭಿಯಾನದ ಅಂಗವಾಗಿ ಜಿಲ್ಲೆಯ ಕಲ್ಯಾಣ ಮಂಟಪಗಳ ಮಾಲೀಕರು ಮತ್ತು ಸಂಘದ ಮುಖ್ಯಸ್ಥರಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ವಾಯ್ ಪಾಟೀಲ್ ಉದ್ಘಾಟಿಸಿದರು.

​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ವಾಯ್ ಪಾಟೀಲ್ ಅವರು, ಬಾಲನ್ಯಾಯ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದು ಅಗತ್ಯವಾಗಿದೆ ಎಂದರು. ಜಿಲ್ಲೆಯಲ್ಲಿ ಕೆಲವು ಕಲ್ಯಾಣ ಮಂಟಪಗಳಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಮದುವೆಗೆ ಬರುವ ವಧು-ವರರ ಶಾಲಾ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಜನನ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪಡೆಯುವಂತೆ ಮಾಲೀಕರಿಗೆ ಸೂಚಿಸಿದರು. ಕಾಯ್ದೆ ಮೀರಿ ಬಾಲ್ಯ ವಿವಾಹ ನಡೆಸುವವರ ವಿರುದ್ಧ ಕಠಿಣ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಮಾತನಾಡಿ, ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. ಹಿರಿಯ ಸಂಘಟಕಿ ನೂರಜಹಾನ ಕಿಲ್ಲೇದಾರ ಮಾತನಾಡಿ, ಪ್ರತಿಯೊಬ್ಬ ನಾಗರಿಕನು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿದ್ದು, ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಬಾಲ್ಯ ವಿವಾಹದಂತಹ ಪಿಡುಗಿನಿಂದ ದೂರವಿಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಶಂಕರ ಪಾಟೀಲ ಅವರು, ಪ್ರತಿ ಕಲ್ಯಾಣ ಮಂಟಪದ ಎದುರು ಬಾಲ್ಯ ವಿವಾಹ ನಿಷೇಧ ಮತ್ತು ಪೋಕ್ಸೊ ಕಾಯ್ದೆಯ ಕುರಿತು ಶಾಶ್ವತ ಮಾಹಿತಿ ಫಲಕಗಳನ್ನು ಅಳವಡಿಸಲು ನಿರ್ದೇಶಿಸಿದರು.

​ಕಾರ್ಯಾಗಾರದಲ್ಲಿ ಅಧಿಕಾರಿಗಳಾದ ಮಹಮ್ಮದಲಿ ತಹಶೀಲ್ದಾರ ಮತ್ತು ಪ್ರಕಾಶ ಕೊಡ್ಲಿವಾಡ ಅವರು ಮಕ್ಕಳ ರಕ್ಷಣಾ ನೀತಿ ಹಾಗೂ ದತ್ತು ಮಾರ್ಗಸೂಚಿಗಳ ಬಗ್ಗೆ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಕಲ್ಯಾಣ ಮಂಟಪದ ಮಾಲೀಕರು ಉಪಸ್ಥಿತರಿದ್ದರು. ಶ್ವೇತಾ ಕಿಲ್ಲೇದಾರ ಸ್ವಾಗತಿಸಿದರು ಮತ್ತು ಶಂಕರ ಬೋಸಲೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *