
ಕುಂದಗೋಳ: ಪಟ್ಟಣದ ಸರ್ವೋದಯ ಶಾಲೆಯ ಹಿಂಭಾಗದಲ್ಲಿರುವ ಸೊಸೈಟಿಯ ಖುಲ್ಲಾ ಜಾಗದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಬಾಲಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿ, ಮತ್ತೊಬ್ಬನಿಗೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ನಿಂಗರಾಜ ಎಂಬ ಯುವಕನೇ ಕೊಲೆಯಾದ ದುರ್ದೈವಿಯಾಗಿದ್ದು, ಸಂಜು ತಂದೆ ಮಹಾಂತೇಶ ಶಿರಸಂಗಿ ಎಂಬುವವರು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಮೂವರು ಅಪ್ರಾಪ್ತ ಬಾಲಕರ ವಿರುದ್ಧ ದೂರು ದಾಖಲಾಗಿದೆ.
ದಿನಾಂಕ 14-01-2025 ರಂದು ಮಧ್ಯಾಹ್ನ 3:45 ರಿಂದ 4:00 ಗಂಟೆಯ ಸುಮಾರಿಗೆ ಈ ಘೋರ ಕೃತ್ಯ ನಡೆದಿದೆ. ಘಟನೆಯ ಪ್ರಮುಖ ವಿವರಗಳ ಪ್ರಕಾರ, ಮೃತ ನಿಂಗರಾಜ ಮತ್ತು ಒಂದನೇ ಆರೋಪಿಯಾದ ಕ್ರಿಷ್ (16) ನಡುವೆ ಹಿಂದಿನ ದಿನ ಅಂದರೆ ಜನವರಿ 13 ರಂದು ಕ್ಷಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ ಕ್ರಿಷ್, ತನ್ನ ಸ್ನೇಹಿತರಾದ ಪ್ರಜ್ವಲ್ ಅಲಿಯಾಸ್ ಶಂಕರಪ್ಪ (17) ಮತ್ತು ನಿಂಗರಾಜ ಅರುಣ ಬ್ಯಾಹಟ್ಟಿ (16) ಅವರೊಂದಿಗೆ ಸೇರಿ ಸಂಚು ರೂಪಿಸಿದ್ದಾನೆ. ಏಕೋದ್ದೇಶ ಸಾಧಿಸುವ ಸಲುವಾಗಿ ಮೃತ ನಿಂಗರಾಜ ಹಾಗೂ ಗಾಯಾಳು ಸಂಜು ಅವರನ್ನು ಸರ್ವೋದಯ ಶಾಲೆಯ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾರೆ.
ಸ್ಥಳಕ್ಕೆ ಬರುತ್ತಿದ್ದಂತೆಯೇ ಆರೋಪಿಗಳು ಏಕಾಏಕಿ ದಾಂಧಲೆ ನಡೆಸಿದ್ದಾರೆ. ಮೊದಲಿಗೆ 1ನೇ ಆರೋಪಿ ಕ್ರಿಷ್, ಸಂಜು ಶಿರಸಂಗಿ ಎಂಬುವವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವ ಉದ್ದೇಶದಿಂದಲೇ ತನ್ನಲ್ಲಿದ್ದ ಚಾಕುವಿನಿಂದ ಬೆನ್ನಿಗೆ ಬಲವಾಗಿ ಚುಚ್ಚಿ ಗಾಯಗೊಳಿಸಿದ್ದಾನೆ. ತದನಂತರ ಫಿರ್ಯಾದಿಯ ಮಗನಾದ ನಿಂಗರಾಜನ ಸರದಿ ಬಂದಿದ್ದು, ಈ ವೇಳೆ 3ನೇ ಆರೋಪಿಯಾದ ನಿಂಗರಾಜ (ತಂದೆ ಅರುಣ) ಎಂಬಾತನು ಮೃತನನ್ನು ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಈ ಸಂದರ್ಭದಲ್ಲಿ 1ನೇ ಆರೋಪಿ ಕ್ರಿಷ್ ಮತ್ತು 2ನೇ ಆರೋಪಿ ಪ್ರಜ್ವಲ್ ಇಬ್ಬರೂ ಸೇರಿ ತಮ್ಮ ಕೈಯಲ್ಲಿದ್ದ ಚಾಕುಗಳಿಂದ ನಿಂಗರಾಜನ ಕುತ್ತಿಗೆ, ಬೆನ್ನು, ಕಿವಿ ಹಾಗೂ ಕಾಲಿಗೆ ಮನಬಂದಂತೆ ಇರಿದಿದ್ದಾರೆ.
ಆರೋಪಿಗಳ ಈ ಮತ್ತು ಬರ್ಬರ ದಾಳಿಯಿಂದಾಗಿ ತೀವ್ರ ರಕ್ತಸ್ರಾವ ಉಂಟಾಗಿ ನಿಂಗರಾಜ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಭಯಾನಕ ಕೃತ್ಯದ ಹಿಂದೆ ಸಾಮಾಜಿಕ ಜಾಲತಾಣಗಳ (Social Media) ಪ್ರಭಾವವಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಹಿಂಸಾತ್ಮಕ ರೀಲ್ಸ್‌ಗಳಿಂದ ಪ್ರೇರಿತರಾಗಿ, ತಾವೂ ಏನಾದರೂ ಮಾಡಿ ರಾತ್ರೋರಾತ್ರಿ ‘ದೊಡ್ಡ ಡಾನ್’ ಆಗಬೇಕೆಂಬ ವಿಪರೀತ ಆಸೆಯೇ ಈ ಹುಚ್ಚಾಟಕ್ಕೆ ಮತ್ತು ಕೊಲೆಗೆ ಕಾರಣ ಎನ್ನಲಾಗಿದೆ. ಇಂತಹ ಮನಸ್ಥಿತಿಯೇ ಬಾಲಕರನ್ನು ಅಪರಾಧ ಲೋಕಕ್ಕೆ ದೂಡಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಇನ್ನೊಂದೆಡೆ, ಈ ಘಟನೆಯು ಪಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಮಕ್ಕಳಿಗೆ 24 ಗಂಟೆಯೂ ಮೊಬೈಲ್ ಫೋನ್ ನೀಡುವ ಬದಲು, ಸೂಕ್ತ ಸಮಯದಲ್ಲಿ ಮತ್ತು ಅಗತ್ಯವಿದ್ದಾಗ ಮಾತ್ರ ನೀಡಬೇಕು. ತಮ್ಮ ಮಕ್ಕಳು ಮೊಬೈಲ್‌ನಲ್ಲಿ ಏನನ್ನು ನೋಡುತ್ತಿದ್ದಾರೆ, ಯಾರ ಸಹವಾಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪಾಲಕರು ಇನ್ನಾದರೂ ಎಚ್ಚೆತ್ತುಕೊಳ್ಳುವುದು ಲೇಸು ಎಂಬ ಮಾತುಗಳು ಪ್ರಜ್ಞಾವಂತ ನಾಗರಿಕರಿಂದ ಗುಸುಗುಸು ಕೇಳಿಬರುತ್ತಿವೆ.
ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

