
ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕರ ಕುಟುಂಬಸ್ಥರನ್ನು ಮಾಜಿ ಶಾಸಕ ಆರ್. ನರೇಂದ್ರ ಅವರು ಭೇಟಿಯಾಗಿ ಸಾಂತ್ವನ ಹೇಳಿದರು. ಹನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಗಾರದ ಆವರಣದಲ್ಲಿ ಮೃತರ ಕುಟುಂಬಕ್ಕೆ ಸಾರಿಗೆ ನಿಗಮದ ವತಿಯಿಂದ ನೀಡಲಾದ ಮೊದಲ ಹಂತದ ಪರಿಹಾರದ ಮೊತ್ತವಾದ ಇಪ್ಪತೈದು ಸಾವಿರ ರೂಪಾಯಿಗಳನ್ನು ಇದೇ ವೇಳೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಸಾರಿಗೆ ನಿಗಮದ ಅಧಿಕಾರಿಗಳ ಮೂಲಕ ಮೃತರ ಕುಟುಂಬಕ್ಕೆ ತಕ್ಷಣದ ನೆರವು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ವಕೀಲರ ನೆರವಿನೊಂದಿಗೆ, ಸರ್ಕಾರದಿಂದ ಸಿಗಬೇಕಾದ ಹೆಚ್ಚಿನ ಪರಿಹಾರ ಹಾಗೂ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಘಟನೆಯ ವಿವರ:
ಮಂಗಳವಾರ ಸಂಜೆ ೫ ಗಂಟೆಯ ಸುಮಾರಿಗೆ ಕೌದಳ್ಳಿ ಕಡೆಯಿಂದ ರಾಮೇಗೌಡನ ಹಳ್ಳಿ ಕಡೆಗೆ ಬೈಕ್‌ನಲ್ಲಿ ಇಬ್ಬರು ತೆರಳುತ್ತಿದ್ದಾಗ, ಮೂಕಳ್ಳಿ ಮಾರಮ್ಮನ ದೇವಸ್ಥಾನದ ಹತ್ತಿರ ಎದುರಿನಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಘೋರ ದುರಂತದಲ್ಲಿ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇಗೌಡನ ಹಳ್ಳಿಯ ಶಿವಪ್ಪ ಬಿನ್ ರಾಜು ಮತ್ತು ಸತೀಶ ಬಿನ್ ಮಾದೇವ ಎಂಬುವರು ಸ್ಥಳದಲ್ಲೇ ಅಸುನೀಗಿದ್ದರು.
ವಿಷಯ ತಿಳಿದಾಕ್ಷಣ ರಾಮಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಹನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪಿಎಸ್‍ಐ ಲೋಕೇಶ್, ಎಎಸ್‍ಐ ಮಹದೇವಸ್ವಾಮಿ, ಮುಖ್ಯ ಪೇದೆಗಳಾದ ಮಹೇಂದ್ರ, ರಾಜು, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರೀಶ್ ಕುಮಾರ್, ಗಿರೀಶ್ ಹಾಗೂ ಮುಖಂಡರಾದ ದಾಸಪ್ಪ, ಮುನಿಮಾರ, ಭದ್ರೆಗೌಡ, ಬಂಗಾರಪ್ಪ, ಮುತ್ತಯ್ಯ, ಮಾದೇವ್, ಹುಚ್ಚಯ್ಯ, ರವಿಕುಮಾರ್, ಸಿದ್ದಪ್ಪ, ಭಾಗ್ಯಮ್ಮ, ಮಹಾದೇವಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಕಾರ್ತಿಕ್ ಗೌಡ ಹನೂರು

