ನವಲಗುಂದ: ಪಟ್ಟಣದ ಅಂದ ಹೆಚ್ಚಿಸಲು ಸ್ವಚ್ಛತೆ ಅವಶ್ಯ; ಶಾಸಕ ಎನ್. ಎಚ್. ಕೋನರಡ್ಡಿ ಕರೆ

Spread the love

ನವಲಗುಂದ: ಪಟ್ಟಣದ ಸ್ವಚ್ಛತೆ ಎಂಬುದು ಕೇವಲ ಪುರಸಭೆಯ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಪಟ್ಟಣದ ಅಂದವನ್ನು ಹೆಚ್ಚಿಸುವಲ್ಲಿ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಹೇಳಿದರು. ಸೋಮವಾರ ಪಟ್ಟಣದ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ನಮ್ಮ ನಡೆ-ಸ್ವಚ್ಛತೆ ಕಡೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ತಮ್ಮ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳುತ್ತಾರೋ ಹಾಗೆಯೇ ತಮ್ಮ ಓಣಿಗಳನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಪುರಸಭೆಯು ವಾರಕ್ಕೊಮ್ಮೆ ಒಂದೊಂದು ಓಣಿಯನ್ನು ಪೂರ್ಣವಾಗಿ ಸ್ವಚ್ಛಗೊಳಿಸುವ ಕಾರ್ಯಕ್ರಮ ರೂಪಿಸಬೇಕು ಮತ್ತು ಸಾರ್ವಜನಿಕರು ಇದಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

​ಇತ್ತೀಚೆಗೆ ಪುರಸಭೆ ಸದಸ್ಯರೊಂದಿಗೆ ದೇಶದ ಅತಿ ಸ್ವಚ್ಛ ನಗರವಾದ ಇಂದೋರ್‌ಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಶಾಸಕರು, ಅಲ್ಲಿನ ಸ್ವಚ್ಛತಾ ಮಾದರಿಯನ್ನು ನವಲಗುಂದದಲ್ಲಿಯೂ ಜಾರಿಗೆ ತರಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚಿಸಿದರು. ಇದೇ ವೇಳೆ ಪಟ್ಟಣದಲ್ಲಿ ಒತ್ತುವರಿಯಾಗಿರುವ ರಸ್ತೆಗಳನ್ನು ಕೂಡಲೇ ತೆರವುಗೊಳಿಸಲು ಕಠಿಣ ಕ್ರಮ ವಹಿಸುವಂತೆ ಪುರಸಭೆ ಅಧಿಕಾರಿಗಳಿಗೆ ಆದೇಶ ನೀಡಿದರು. ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಮಿಷನ್ (SBM) ಯೋಜನೆಯಡಿಯಲ್ಲಿ ಒದಗಿಸಲಾದ ನೂತನ ಮಿನಿ ಹಿಟಾಚಿ ಯಂತ್ರಕ್ಕೆ ಶಾಸಕರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

​ಈ ಸಂದರ್ಭದಲ್ಲಿ ಪುರಸಭೆ ಕಾರ್ಯಾಲಯದಿಂದ ಆರಂಭವಾದ ‘ನಮ್ಮ ನಡೆ-ಸ್ವಚ್ಛತೆ ಕಡೆ’ ಜಾಗೃತಿ ಜಾಥಾವು ಬಸ್ ನಿಲ್ದಾಣ, ಗಣಪತಿ ದೇವಸ್ಥಾನ ಮಾರ್ಗವಾಗಿ ಮುಖ್ಯ ಮಾರುಕಟ್ಟೆ, ಕಳ್ಳಿಮಠ ಓಣಿ ಮತ್ತು ರೈತ ಭವನದ ಮೂಲಕ ಹಾಯ್ದು ಪುರಸಭೆ ಆವರಣದಲ್ಲಿ ಮುಕ್ತಾಯಗೊಂಡಿತು. ಈ ಅಭಿಯಾನದಲ್ಲಿ ತಹಶೀಲ್ದಾರ ಸುಧೀರ್ ಸಾಹುಕಾರ್, ಮುಖ್ಯಾಧಿಕಾರಿ ಎಸ್. ಪಿ. ಪೂಜಾರ, ಸಿಪಿಐ ರವಿ ಕಪ್ಪತ್ತನವರ ಹಾಗೂ ಗಣ್ಯರಾದ ಉಮೇಶ ಬಮ್ಮಕ್ಕನವರ, ಗಾಯತ್ರಿದೇವಿ ಪಾಟೀಲ, ಮನೋಹರ ದ್ಯಾಬೇರಿ, ಹನುಮಂತ ರೋಗಿ ಉಪಸ್ಥಿತರಿದ್ದರು. ಮುಖಂಡರಾದ ಅಶೋಕ ಮಜ್ಜಿಗುಡ್ಡ, ಬಸನಗೌಡ ಪಾಟೀಲ, ಉಸ್ಮಾನ ಬಬರ್ಚಿ, ದೇವೇಂದ್ರಪ್ಪ ಹಳ್ಳದ, ಯಲ್ಲಪ್ಪ ಭೋವಿ, ಜೀವನ ಪವಾರ, ಚಂದ್ರಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಮತ್ತು ಪೌರಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಂಡು ಸ್ವಚ್ಛತೆಯ ಘೋಷಣೆಗಳನ್ನು ಕೂಗಿದರು.

Leave a Reply

Your email address will not be published. Required fields are marked *