
ಅಣ್ಣಿಗೇರಿ: ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳ ವತಿಯಿಂದ 108 ಕುಂಭಮೇಳದೊಂದಿಗೆ ಅಯ್ಯಪ್ಪ ಸ್ವಾಮಿಯ ಭವ್ಯ ಮೆರವಣಿಗೆ ಹಾಗೂ ಮಹಾಪೂಜಾ ಕಾರ್ಯಕ್ರಮಗಳು ಅತ್ಯಂತ ಸಡಗರ–ಸಂಭ್ರಮದಿಂದ ಜರುಗಿದವು. ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಗಳ ನಡುವೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿಯ ಭಾವಚಿತ್ರದ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು.
ದಾಸೋಹ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. “ಅಯ್ಯಪ್ಪ ಮಾಲಾಧಾರಿಗಳು ಮಾಲೆ ಧರಿಸಿದ ಅವಧಿಯಲ್ಲಿ ಅತ್ಯಂತ ಕಠಿಣ ವ್ರತವನ್ನು ಪಾಲಿಸುತ್ತಾರೆ. ಮಾಲೆ ವಿಸರ್ಜನೆ ಮಾಡಿದ ನಂತರವೂ ಆ ಶಿಸ್ತು ಮತ್ತು ಭಕ್ತಿಯ ಅಲ್ಪ ಭಾಗವನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯ ಜನ್ಮ ಪಾವನವಾಗುತ್ತದೆ,” ಎಂದು ಅವರು ಕಿವಿಮಾತು ಹೇಳಿದರು. 108 ಕುಂಭಗಳನ್ನು ಹೊತ್ತ ಸುಮಂಗಲೆಯರು ಮೆರವಣಿಗೆಗೆ ಕಳೆ ನೀಡಿದರು.
ಅಣ್ಣಿಗೇರಿ ಶ್ರೀ ತಿರುವಾಭರಣ ಭೂಷಿತ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಹಾಗೂ ಭಕ್ತ ವೃಂದದ ವತಿಯಿಂದ ಅಮೃತೇಶ್ವರ ದೇವಸ್ಥಾನದ ಬಯಲಿನಲ್ಲಿ ಶನಿವಾರ ಮಹಾಪೂಜೆ ಆಯೋಜಿಸಲಾಗಿತ್ತು. ಈ ಅಂಗವಾಗಿ ಮಧ್ಯಾಹ್ನ ಭಕ್ತರಿಗಾಗಿ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಂಜೆ ಗುರುಸ್ವಾಮಿಗಳಾದ ವಿನಯ ರೇವಕರ ಅವರ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ಮಹಾಪೂಜೆ ನೆರವೇರಿಸಲಾಯಿತು. ಈ ವೇಳೆ ಮಾತನಾಡಿದ ರೇವಕರ ಅವರು, ಜನೆವರಿ 12 ರಂದು ಅಮೃತೇಶ್ವರ ದೇವಸ್ಥಾನದ ಬಯಲಿನಲ್ಲಿ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದಾಸೋಹ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು, ಅಣ್ಣಿಗೇರಿ ಪೊಲೀಸ್ ಠಾಣಾ ಅಧಿಕಾರಿ ಉಮಾದೇವಿ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಗುರುಸ್ವಾಮಿಗಳಾದ ವಿನಯ ಶಿರೋಡಕರ, ಮುದಕಣ್ಣ ಬಜಂತ್ರಿ, ರಾಜು ರಾಯ್ಕರ್, ರವಿ ಅಂಗಡಿ, ಅಶೋಕ ಉಣಕಲ್ಲ, ಮಂಜುನಾಥ ಹಳ್ಳಿಕೇರಿ, ಪ್ರಶಾಂತ ಹಡಪದ ಸೇರಿದಂತೆ ನೂರಾರು ಅಯ್ಯಪ್ಪ ಮಾಲಾಧಾರಿಗಳು ಉಪಸ್ಥಿತರಿದ್ದರು. ಅನ್ನದಾಸೋಹಕ್ಕೆ ಚಾಲನೆ ನೀಡಿದ ಪೂಜ್ಯ ಶ್ರೀಗಳನ್ನು ಸೇವಾ ಸಮಿತಿ ವತಿಯಿಂದ ಭಕ್ತಿಯಿಂದ ಸನ್ಮಾನಿಸಲಾಯಿತು.

