​ಧಾರವಾಡ ಜಿಲ್ಲೆಯಾದ್ಯಂತ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನಕ್ಕೆ ಚಾಲನೆ

Spread the love

ಧಾರವಾಡ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಹಾಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿರುವ ಪ್ರಕರಣಗಳ ವಿಲೇವಾರಿಗಾಗಿ ಜನೆವರಿ 2ರಿಂದ ಸತತ 90 ದಿನಗಳ ಕಾಲ ‘ವಿಶೇಷ ಮಧ್ಯಸ್ಥಿಕೆ ಅಭಿಯಾನ’ವನ್ನು ಆಯೋಜಿಸಲಾಗಿದೆ.

​’ದೇಶಕ್ಕಾಗಿ 90 ದಿನಗಳು 2.0′ ಎಂಬ ಘೋಷವಾಕ್ಯದೊಂದಿಗೆ ಈ ಬೃಹತ್ ಅಭಿಯಾನ ನಡೆಯುತ್ತಿದ್ದು, ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿಯಿರುವ ಸಿವಿಲ್, ಕೌಟುಂಬಿಕ ಹಾಗೂ ರಾಜಿ ಸಂಧಾನಕ್ಕೆ ಅರ್ಹವಾದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಈ ಅಭಿಯಾನವು ಏಕಕಾಲದಲ್ಲಿ ಆರಂಭವಾಗಿದ್ದು, ಮಾರ್ಚ್ ಅಂತ್ಯದವರೆಗೆ ಚಾಲನೆಯಲ್ಲಿರಲಿದೆ.

​ಈ ಅಭಿಯಾನದ ಅಡಿಯಲ್ಲಿ ರಾಜಿ ಆಗಬಹುದಾದ ಪ್ರಕರಣಗಳನ್ನು ಗುರುತಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಮಧ್ಯಸ್ಥಿಕೆ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ನುರಿತ ಮತ್ತು ವಿಶೇಷ ತರಬೇತಿ ಪಡೆದ ಮಧ್ಯಸ್ಥಿಕೆಗಾರರ ಮೂಲಕ ಉಭಯ ಕಕ್ಷಿದಾರರ ನಡುವೆ ಸೌಹಾರ್ದಯುತವಾಗಿ ಸಂಧಾನ ಮಾಡಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಕಕ್ಷಿದಾರರಿಗೆ ಸಮಯ ಮತ್ತು ಹಣದ ಉಳಿತಾಯವಾಗುವುದಲ್ಲದೆ, ಸಂಬಂಧಗಳು ಹಳಸದಂತೆ ಪ್ರಕರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

​ಸಾರ್ವಜನಿಕರು ಮತ್ತು ಕಕ್ಷಿದಾರರು ಈ ವಿಶೇಷ ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಪಿ.ಎಫ್. ದೊಡ್ಡಮನಿ ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಅಥವಾ ನೆರವಿಗಾಗಿ ಧಾರವಾಡದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಹುಬ್ಬಳ್ಳಿ, ಕಲಘಟಗಿ, ನವಲಗುಂದ ಮತ್ತು ಕುಂದಗೋಳ ತಾಲೂಕುಗಳ ಕಾನೂನು ಸೇವಾ ಸಮಿತಿ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *