ಮಾವು ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಮತ್ತು ಪೂರಕ ಕ್ರಮಗಳು

Spread the love


ಧಾರವಾಡ, ಜ. 01: ಮಾವಿನಲ್ಲಿ ಹೂ ಬಿಡುವ ಪ್ರಕ್ರಿಯೆ ಡಿಸೆಂಬರ್‌ನಿಂದ ಪ್ರಾರಂಭವಾಗಿ ಫೆಬ್ರುವರಿ ಅಂತ್ಯದವರೆಗೂ ವಿವಿಧ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ನವೆಂಬರ್ ಮಧ್ಯಭಾಗದಿಂದಲೂ ಹೂ ಬಿಡುವುದು ಕಂಡುಬರುತ್ತದೆ. ಹೂ ಬಿಟ್ಟ ನಂತರ ಉಪದ್ರವಿ ಕೀಟಗಳಾದ ಜಿಗಿಹುಳು, ಹೂತೆನೆ, ಕುಡಿ ಕೊರಕ, ಥ್ರಿಪ್ಸ್, ನುಸಿ, ಹಿಟ್ಟು ತಿಗಣೆ, ಒಟೆ ಕೊರಕ ಹಾಗೂ ಹೂತೆನೆ ಕಪ್ಪಾಗುವ ರೋಗ, ಬೂದಿ ರೋಗ, ಕಾಡಿಗೆ ರೋಗ, ಎಲೆಚಿಬ್ಬು ರೋಗಗಳು ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ.

ಅಗತ್ಯ ಪೂರಕ ಕ್ರಮಗಳು:
ಸಿಂಪರಣಾ ದ್ರಾವಣಗಳನ್ನು ಮಾವಿನ ಮರದ ಕಾಂಡ ಹಾಗೂ ಎಲ್ಲಾ ರೆಂಬೆ–ಕೊಂಬೆಗಳಿಗೆ ತಲುಪುವಂತೆ ಪ್ರಕಾಶಮಾನ ಬೆಳಕಿನ ವೇಳೆಯಲ್ಲಿ ಸಿಂಪಡಿಸಬೇಕು. ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಶ ನಡೆಯುವ ಸಮಯದಲ್ಲಿ ಗಂಧಕವನ್ನು ಯಾವುದೇ ಕಾರಣಕ್ಕೂ ಸಿಂಪಡಿಸಬಾರದು. ಗಂಧಕವು ಪರಾಗ ಸ್ಪರ್ಶ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂಗಳಿಗೆ ಹಾಗೂ ಎಳೆಯ ಕಚ್ಚಿದ ಕಾಯಿಗಳಿಗೆ ಹಾನಿ ಉಂಟುಮಾಡುತ್ತದೆ.

ಪರಾಗ ಸ್ಪರ್ಶ ನಡೆಯುವ ಅವಧಿಯಲ್ಲಿ ಗಿಡಿಗಳಿಗೆ ನೀರುಣಿಸಬಾರದು. ಪರಾಗ ಸ್ಪರ್ಶ ಪೂರ್ಣಗೊಂಡ ನಂತರ ಕಾಯಿಗಳು ಬಟಾಣಿ ಗಾತ್ರದಿಂದ ಗೋಳಿ ಗಾತ್ರದ ಹಂತ ತಲುಪಿದಾಗ ನೀರುಣಿಸಲು ಪ್ರಾರಂಭಿಸಬಹುದು. ಅಗತ್ಯವಿದ್ದಲ್ಲಿ ಎರಡು ಅಥವಾ ಮೂರು ರಕ್ಷಣಾತ್ಮಕ/ಪೂರಕ ನೀರಾವರಿಯನ್ನು ಕೈಗೊಳ್ಳಬಹುದು.

ಚಿಕ್ಕ ಕಾಯಿಗಳು ಉದುರದಂತೆ ತಡೆಯಲು ಸಸ್ಯ ಬೆಳವಣಿಗೆ ನಿಯಂತ್ರಕ ‘ಒಚಿಚಿ (Paclobutrazol)’ ಅನ್ನು 50 ಪಿಪಿಎಂ ಪ್ರಮಾಣದಲ್ಲಿ (0.5 ಮಿ.ಲಿ./ಲೀ. ನೀರಿನಲ್ಲಿ ಬೆರಸಿ) ಸಿಂಪಡಿಸಬೇಕು. ಚಿಕ್ಕ ಕಾಯಿಗಳು ಬೆಳೆಯುವ ಹಂತದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ಅಭಿವೃದ್ಧಿಪಡಿಸಿರುವ ‘ಮ್ಯಾಂಗೋ ಸ್ಪೆಷಲ್’ ಅನ್ನು ಪ್ರತಿ 10 ಲೀಟರ್ ನೀರಿನಲ್ಲಿ 50 ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸಬೇಕು.

ಈ ಸಿಂಪರಣಾ ದ್ರಾವಣಕ್ಕೆ ಸೋಪು ದ್ರಾವಣ (0.5 ಮಿ.ಲಿ./ಲೀ.) ಹಾಗೂ ಅರ್ಧ ಹೋಳು ನಿಂಬೆರಸವನ್ನು ಬೆರೆಸಿ ಸಿಂಪಡಿಸಿದಲ್ಲಿ, ದ್ರಾವಣವು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುತ್ತದೆ. ಕೈಗೆಟುಕುವ ಹಂತದ ಸಣ್ಣ ಕಾಯಿಗಳಿಗೆ ಪೇಪರ್ ಕವರ್ ಹೊದಿಕೆ ಅಳವಡಿಸಿದಲ್ಲಿ ಊಜಿ ಬಾದೆ ನಿಯಂತ್ರಣವಾಗುವುದರ ಜೊತೆಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು.

ಕೀಟ ಹಾಗೂ ರೋಗ ನಿಯಂತ್ರಣ ಕ್ರಮಗಳು:
ಹೂ ತೆನೆ ಹೊರಹೊಮ್ಮುವ ಹಂತದಲ್ಲಿ ಜಿಗಿಹುಳು, ಥ್ರಿಪ್ಸ್, ಬೂದಿ ರೋಗ, ಹೂ ಒಣಗುವ ರೋಗ ಕಂಡುಬಂದಲ್ಲಿ ತಕ್ಷಣ ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಿಂಪಡಿಸಿ ನಿಯಂತ್ರಿಸಬೇಕು.

ಈ ಹಂತದಲ್ಲಿ ಡೆಲ್ಟಾಮೆಥ್ರಿನ್ 2.8 ಇಸಿ – 1.0 ಮಿ.ಲಿ./ಲೀ., ಹೆಕ್ಸಕೊನಜೋಲ್ 5 ಇಸಿ – 1.0 ಮಿ.ಲಿ./ಲೀ. ಅಥವಾ ಡಯಾಫೆಂಥಿಯುರಾನ್ 75 ಡಬ್ಲ್ಯುಪಿ – 1.0 ಗ್ರಾಂ/ಲೀ., ಡೈಫೆಂಕೊನಜೋಲ್ 25 ಇಸಿ – 0.5 ಮಿ.ಲಿ./ಲೀ. ಪ್ರಮಾಣದಲ್ಲಿ ಸಿಂಪಡಿಸಬಹುದು.

ಹೂ ಸಂಪೂರ್ಣ ಅರಳಿದ ಹಂತ, ಪರಾಗ ಸ್ಪರ್ಶ ಹಂತ ಹಾಗೂ ಕಾಯಿ ಕಚ್ಚುವ ಹಂತದಲ್ಲಿ ಹೂ ಗೂಡುಕಟ್ಟುವ ಹುಳು, ಜಿಗಿಹುಳು, ಹೂ ಒಣಗುವ ರೋಗ, ಚಿಬ್ಬು ರೋಗ, ಬೂದಿ ರೋಗ ಹಾಗೂ ಕಾಡಿಗೆ ರೋಗ ಕಂಡುಬಂದಲ್ಲಿ ಇಂಡಾಕ್ಸಕಾರ್ಬ್ 14.8 ಎಸ್‌ಸಿ – 1.0 ಮಿ.ಲಿ./ಲೀ., ಡೈಥೇನ್ ಎಂ–45 – 2.5 ಗ್ರಾಂ/ಲೀ. ಅಥವಾ ಡೆಲ್ಟಾಮೆಥ್ರಿನ್ 2.8 ಇಸಿ – 1.0 ಮಿ.ಲಿ./ಲೀ. ಸಿಂಪಡಿಸಬೇಕು.

ಅದೇ ರೀತಿ ಟೆಬೂಕೋನಜೋಲ್ 50% + ಟ್ರೈಫ್ಲಾಕ್ಸಿಸ್ಟ್ರೋಬಿನ್ 25% ಡಬ್ಲ್ಯುಜಿ ಔಷಧಿಯನ್ನು 0.5 ಮಿ.ಲಿ./ಲೀ. ಪ್ರಮಾಣದಲ್ಲಿ ಸಿಂಪಡಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply

Your email address will not be published. Required fields are marked *