ಕುಂದಗೋಳ ತಹಶೀಲ್ದಾರ್ ಭೇಟಿ ವೇಳೆ ಬಟಾಬಯಲಾದ ಅಕ್ಕಿ ಹಗರಣ: 78 ಮೂಟೆ ಅಕ್ಕಿ ನಾಪತ್ತೆ ದೃಢಪಡಿಸಿದ ರಾಜು ಮಾವರಕರ್

Spread the love

ಕುಂದಗೋಳ: ತಾಲ್ಲೂಕಿನ ಮತ್ತಿಘಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಹಸಿವು ನೀಗಿಸಬೇಕಿದ್ದ ಅಕ್ಕಿ ದಾಸ್ತಾನಿನಲ್ಲಿ ಬೃಹತ್ ಪ್ರಮಾಣದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಕುಂದಗೋಳ ತಹಶೀಲ್ದಾರ್ ರಾಜು ಮಾವರಕರ್ ಅವರು ನಡೆಸಿದ ಪರಿಶೀಲನೆಯಲ್ಲಿ, ವಸತಿ ನಿಲಯದ ದಾಸ್ತಾನು ಕೊಠಡಿಯಲ್ಲಿ ಇರಬೇಕಿದ್ದ ಸುಮಾರು 78 ಮೂಟೆ ಅಕ್ಕಿ ನಾಪತ್ತೆಯಾಗಿರುವುದು ಸ್ವತಃ ತಹಶೀಲ್ದಾರರೇ ದೃಢಪಡಿಸಿದ್ದಾರೆ. ಈ ಗಂಭೀರ ಪ್ರಕರಣ ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಹಶೀಲ್ದಾರ್ ದಾಳಿ ಮತ್ತು ಪತ್ತೆಯಾದ ಅಕ್ರಮ:
ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಡಿಸೆಂಬರ್ 12ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ತಹಶೀಲ್ದಾರ್ ರಾಜು ಮಾವರಕರ್ ಅವರು, ದಾಸ್ತಾನು ಕೊಠಡಿಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ವೇಳೆ, ಡಿಸೆಂಬರ್ 9ರಂದು ಕೆ.ಎಫ್‌.ಸಿ.ಎಸ್.ಸಿ ಗೋದಾಮಿನಿಂದ ಸರಬರಾಜಾಗಿದ್ದ ಅಕ್ಕಿಯಲ್ಲಿ ತಲಾ 50 ಕೆಜಿ ತೂಕದ 78 ಮೂಟೆಗಳು ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಅಕ್ಕಿ ನಾಪತ್ತೆಯ ಕುರಿತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗ ತನಿಖಾ ವರದಿಯನ್ನು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ಅಧಿಕಾರಿಗಳ ಕುಂಟು ನೆಪ ಮತ್ತು ಉದ್ಭವಿಸಿದ ಪ್ರಶ್ನೆಗಳು:
ದಾಸ್ತಾನಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದಾಗ, ಸಂಬಂಧಪಟ್ಟ ಅಧಿಕಾರಿಗಳು “ಅಕ್ಕಿ ಸಾಗಿಸುವ ವಾಹನ ಕೆಟ್ಟು ಹೋಗಿದ್ದರಿಂದ ವಿಳಂಬವಾಗಿದೆ” ಎಂಬ ಹಾರಿಕೆ ಉತ್ತರ ನೀಡಿದ್ದಾರೆ. ಆದರೆ, ಈ ಸಮಜಾಯಿಷಿಯನ್ನು ತನಿಖಾಧಿಕಾರಿಗಳು ತಳ್ಳಿಹಾಕಿದ್ದು, ವಾಹನ ಕೆಟ್ಟಿದ್ದರೆ ಪರ್ಯಾಯ ವ್ಯವಸ್ಥೆ ಏಕೆ ಮಾಡಲಿಲ್ಲ? ಇಷ್ಟು ದಿನಗಳ ಕಾಲ ಅಕ್ಕಿ ಎಲ್ಲಿತ್ತು? ಎಂಬ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಡ ವಿದ್ಯಾರ್ಥಿಗಳ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕಿ, ಅಕ್ಕಿಯನ್ನು ಕಾಳಸಂತೆಗೆ ಮಾರಾಟ ಮಾಡುವ ಜಾಲ ಇದರ ಹಿಂದೆ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನಗಳು ಮತ್ತಷ್ಟು ಬಲವಾಗಿವೆ.

ಜಿಲ್ಲಾಡಳಿತದ ನಡೆ ಮೇಲೆ ಎಲ್ಲರ ಕಣ್ಣು:
ತಹಶೀಲ್ದಾರ್ ಅವರ ಸ್ಪಷ್ಟ ತನಿಖಾ ವರದಿಯ ಬಳಿಕವೂ ತಪ್ಪಿತಸ್ಥರ ವಿರುದ್ಧ ತಕ್ಷಣದ ಹಾಗೂ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣ ಈಗ ಜಿಲ್ಲಾಧಿಕಾರಿಗಳ ಅಂಗಳಕ್ಕೆ ತಲುಪಿದ್ದು, ಭ್ರಷ್ಟಾಚಾರದ ವಿರುದ್ಧ ‘ಡಿಸಿ ಮೇಡಂ’ ಯಾವ ರೀತಿಯ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದರ ಮೇಲೆ ಸಾರ್ವಜನಿಕರ ದೃಷ್ಟಿ ನೆಟ್ಟಿದೆ.

ಹೋರಾಟಗಾರರ ಜಂಟಿ ಆಗ್ರಹ:
ಈ ಹಗರಣದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಮ್ಮ ಕರ್ನಾಟಕ ಜನಪರ ಸಂರಕ್ಷಣಾ ವೇದಿಕೆಯ (ರಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ದೊಡ್ಡಮನಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ರಿ) (ಅಂಬೇಡ್ಕರವಾದ) ಧಾರವಾಡ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಶರೇವಾಡ ಅವರು, ವಿದ್ಯಾರ್ಥಿಗಳ ಅನ್ನ ನುಂಗಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *