ಅಳಗವಾಡಿ ಗ್ರಾಮದಲ್ಲಿ ಸಂಭ್ರಮದ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಉತ್ಸವ ಸಂಪನ್ನ

Spread the love

ನವಲಗುಂದ: ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಕಳೆದ ಏಳು ದಿನಗಳಿಂದ ಅತ್ಯಂತ ಭಕ್ತಿಭಾವದಿಂದ ಜರುಗುತ್ತಿದ್ದ 13ನೇ ವರ್ಷದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಉತ್ಸವವು ಗುರುವಾರ ಸಡಗರದೊಂದಿಗೆ ಸಮಾರೋಪಗೊಂಡಿತು. ವಾರಕರಿ ಸಂಪ್ರದಾಯದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದ ಈ ಉತ್ಸವವು ಗ್ರಾಮದಾದ್ಯಂತ ಆಧ್ಯಾತ್ಮಿಕ ಕಳೆಯನ್ನು ಹೆಚ್ಚಿಸಿತ್ತು.

​ಉತ್ಸವದ ಅವಧಿಯಲ್ಲಿ ಭಕ್ತಾದಿಗಳು ತಾಳ, ಮೃದಂಗಗಳ ನಾದದೊಂದಿಗೆ ಶ್ರೀ ಜ್ಞಾನೇಶ್ವರ ಮಾವುಲಿಯ ಪಾರಾಯಣವನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಿದರು. ಶಿರಕೋಳದ ಶ್ರೀ ಹ.ಭ.ಪ. ರಾಮಕೃಷ್ಣ ಸಂಬರ ಆಚಾರ್ಯರು ವ್ಯಾಸಪೀಠವನ್ನು ಅಲಂಕರಿಸಿ ಪಾರಾಯಣವನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಸಮಾರೋಪದ ದಿನವಾದ ಗುರುವಾರ ಅಖಂಡ ಹರಿನಾಮ ಸ್ಮರಣೆ, ಮಹಾ ಆರತಿ ಹಾಗೂ ಭಕ್ತರಿಗೆ ಮಹಾಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

​ಸಮಾರೋಪದ ಪ್ರಮುಖ ಆಕರ್ಷಣೆಯಾಗಿ ನಡೆದ ದಿಂಡಿ ಸೋಹಳಾ ಗ್ರಾಮ ಪ್ರದಕ್ಷಿಣೆಯು ನೋಡುಗರ ಗಮನ ಸೆಳೆಯಿತು. ವೀಣೆ ಸೇವೆ, ಕುಂಭ ಪೂಜೆ ಮತ್ತು ಸಾಂಪ್ರದಾಯಿಕ ಆರತಿಗಳೊಂದಿಗೆ ಸಾಗಿದ ಈ ಮೆರವಣಿಗೆಯಲ್ಲಿ ಆಳಂದಿ ಮಾವುಲಿ ಕುದುರೆ ಹಾಗೂ ಕೊಲ್ಲಾಪುರದ ವಾರಕರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಬಳಗ ಪಾಲ್ಗೊಂಡಿತ್ತು. ಕೊಲ್ಲಾಪುರದ ಹರಿಭಕ್ತರಾದ ಶ್ರೀ ತುಕಾರಾಮ ಪವಾರ ಗುರೂಜಿ ಅವರ ಸಮ್ಮುಖದಲ್ಲಿ ನಡೆದ ಈ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಿತು.

​ದಿಂಡಿ ಮಾಲಿಕರಾದ ರಾಮರೆಡ್ಡಿ ಅಣ್ಣಿಗೇರಿ ಹಾಗೂ ಅಳಗವಾಡಿಯ ಸಂತ ಮಂಡಳಿಯವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ದಾನಿಗಳನ್ನು ಮತ್ತು ಭಕ್ತಾದಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಪುಂಡಲೀಕ ಮಹಾರಾಜರು, ಫಕೀರಪ್ಪ ಸವದತ್ತಿ, ಡಿ. ಎನ್ ಪಾಟೀಲ, ಮಂಜುನಾಥ ಮೊರೆ, ಕಲ್ಲಪ್ಪ ಬೆಳವಣಕಿ, ಗೋಪಾಲ ಅಣ್ಣಿಗೇರಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ನೂರಾರು ಹರಿಭಕ್ತರು ಉಪಸ್ಥಿತರಿದ್ದು ಹರಿನಾಮ ಸ್ಮರಣೆಗ ಪಾತ್ರರಾದರು.

Leave a Reply

Your email address will not be published. Required fields are marked *