
ಧಾರವಾಡ: ಕರೋಕೆ ಸಂಗೀತವು ಕೇವಲ ಹವ್ಯಾಸವಾಗಿ ಉಳಿಯದೆ, ಇಂದು ಒಂದು ಪ್ರಬಲ ಸಂಗೀತ ಮಾಧ್ಯಮವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾದ ಸತೀಶ ತುರಮರಿ ಅವರು ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸಂಗೀತ ವರ್ಷಿಣಿ ಕಲಾ ಸಂಸ್ಥೆಯು ಆಯೋಜಿಸಿದ್ದ ರಾಜ್ಯಮಟ್ಟದ ಕರೋಕೆ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರೋಕೆ ಸಂಗೀತಗಾರರು ಹುಟ್ಟಿನಿಂದ ಸಂಗೀತಾಭ್ಯಾಸ ಮಾಡದಿದ್ದರೂ, ತಮ್ಮ ವೃತ್ತಿ ಜೀವನದ ಒತ್ತಡದ ನಡುವೆ ಸಂಗೀತವನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ. ಯಾವುದೇ ಗುರುಗಳಿಲ್ಲದೆ, ಸ್ವತಃ ಆಸಕ್ತಿಯಿಂದ ಸ್ಟುಡಿಯೋಗಳಿಗೆ ಭೇಟಿ ನೀಡಿ ಹಾಡಿನ ಟ್ರ್ಯಾಕ್‌ಗಳ ಮುಖಾಂತರ ಸಂಗೀತ ಕಲಿತು, ಮೂಲ ಗಾಯಕರಷ್ಟೇ ಅದ್ಭುತವಾಗಿ ಹಾಡುತ್ತಿರುವುದು ಶ್ಲಾಘನೀಯ. ಇಂತಹ ಗಾಯಕರ ಆತ್ಮವಿಶ್ವಾಸ ಮತ್ತು ಪ್ರಯತ್ನ ಮೆಚ್ಚುವಂತದ್ದು. ಕರೋಕೆ ಗಾಯಕರು ಮುಂಬರುವ ದಿನಗಳಲ್ಲಿ ಕೇವಲ ಚಲನಚಿತ್ರ ಗೀತೆಗಳಿಗೆ ಸೀಮಿತವಾಗದೆ ಕನ್ನಡ ನಾಡು-ನುಡಿ, ಜಾನಪದ, ಭಾವಗೀತೆ ಹಾಗೂ ಹಂತಿಪದಗಳನ್ನು ಕಲಿತು ಪ್ರಸ್ತುತಪಡಿಸಬೇಕು. ಅಲ್ಲದೆ, ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವ ಮೂಲಕ ಅಲ್ಲಿನ ಜನರಿಗೂ ಮನರಂಜನೆ ನೀಡಬೇಕು ಎಂದು ಅವರು ಕರೆ ನೀಡಿದರು.
ಸಂಗೀತವರ್ಷಿಣಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ವೀಣಾ ಪತ್ತಾರ ಅವರು ಕಳೆದ ಎಂಟು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳ ಪ್ರಸಿದ್ಧ ಕರೋಕೆ ಗಾಯಕರನ್ನು ಒಗ್ಗೂಡಿಸಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಹರ್ಷದಾಯಕ ಸಂಗತಿ. ಈ ಕಾರ್ಯಕ್ಕೆ ಅವರ ಪತಿ ಅನಂತ ಪತ್ತಾರ ಅವರು ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಗಾಯಕರು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಕಾರ್ಯಕ್ರಮ ನೀಡಿರುವುದು ಅವರ ಸಂಗೀತ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ತುರಮರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ವೀಣಾ ಅನಂತ ಪತ್ತಾರ ವಹಿಸಿದ್ದರು. ವೇದಿಕೆಯ ಮೇಲೆ ಪ್ರಮುಖರಾದ ತಿಪ್ಪಣ್ಣ ಭಾಂಡಗೆ, ಸಂಜೀವ ಸಾಂಬ್ರಾಣಿ, ರಾಜಶ್ರೀ ಗುಂಡಮಿ, ಆನಂದ ಕಲ್ಲಾಪುರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮಾರುತಿ ಬಡೆಣ್ಣವರ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಹ್ಲಾದ ಕಡೆಚೂರ ಕಾರ್ಯಕ್ರಮ ನಿರ್ವಹಿಸಿದರು. ಅನಂತ ಪತ್ತಾರ ಅವರು ವಂದನಾರ್ಪಣೆ ಮಾಡಿದರು.

