
ಧಾರವಾಡ, ಡಿ. 11: ಮಳೆಯಾಶ್ರಿತ ಕೃಷಿಯನ್ನು ಕೇವಲ ಜೀವನಾಧಾರಿತವಾಗಿಸದೆ, ಸುಸ್ಥಿರ ಕೃಷಿಯನ್ನಾಗಿ ಪರಿವರ್ತಿಸಿ ರೈತರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಕೃಷಿ ಭಾಗ್ಯ ಮತ್ತು ಕೃಷಿ ಭಾಗ್ಯ ಎಸ್‍ಡಿಎಮ್‍ಎಫ್ ಯೋಜನೆಯ ಸೌಲಭ್ಯ ಪಡೆಯಲು ಜಿಲ್ಲೆಯ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತುತ ಸಾಲಿಗೆ ಧಾರವಾಡ ಜಿಲ್ಲೆಗೆ ಈ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದ್ದು, ಪ್ಯಾಕೇಜ್ ಮಾದರಿಯಲ್ಲಿ ಇದು ಅನುಷ್ಠಾನಗೊಳ್ಳುತ್ತಿದೆ.
ಕೃಷಿ ಭಾಗ್ಯ ಯೋಜನೆಯಡಿ ಒಟ್ಟು ಆರು ಕಡ್ಡಾಯ ಘಟಕಗಳನ್ನು ಒಳಗೊಂಡಿದ್ದು, ಯೋಜನೆಯ ಸಮಗ್ರ ಪ್ರಯೋಜನ ಪಡೆಯಲು ರೈತರು ಎಲ್ಲಾ ಘಟಕಗಳನ್ನು ತಪ್ಪದೇ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಯೋಜನೆಯ ಪ್ರಮುಖ ಘಟಕಗಳಾದ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆಯಾದ ಕೃಷಿಹೊಂಡ ನಿರ್ಮಾಣ, ಹೊಂಡದ ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಹಾಗೂ ಸುರಕ್ಷತೆಗಾಗಿ ಹೊಂಡದ ಸುತ್ತಲೂ ತಂತಿಬೇಲಿ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ. ಇದರೊಂದಿಗೆ ಕೃಷಿ ಹೊಂಡದಿಂದ ನೀರು ಎತ್ತಲು ಡೀಸೆಲ್, ಪೆಟ್ರೋಲ್ ಅಥವಾ ಸೋಲಾರ್ ಪಂಪ್‍ಸೆಟ್ ಮತ್ತು ಬೆಳೆಗೆ ಹಿತಮಿತವಾಗಿ ನೀರು ಹಾಯಿಸಲು ಸೂಕ್ಷ್ಮ ನೀರಾವರಿ ಅಥವಾ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.
ಸದರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೂ ಅನುದಾನ ಲಭ್ಯವಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿದ ಕೂಡಲೇ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು. ಆದ್ದರಿಂದ ಈ ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಧಾರವಾಡದ ರಾಜಶೇಖರ ಅನಗೌಡರ (8277931282), ಹುಬ್ಬಳ್ಳಿಯ ಮಂಜುಳಾ ತೆಂಬದ (8277931288), ಕಲಘಟಗಿಯ ಅಮರ ನಾಯ್ಕರ (8277931291), ಕುಂದಗೋಳದ ರೇಖಾ ಆರ್. ಗಡ್ಡದವರ (9071449976) ಹಾಗೂ ನವಲಗುಂದದ ರವೀಂದ್ರಗೌಡ ಪಾಟೀಲ (8277931295) ಅವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

