
ಬೃಹತ್ ಸ್ಪಿರಿಟ್ ಹಾಗೂ ಗಾಂಜಾ ಜಾಲ ಭೇದಿಸಿದ ಧಾರವಾಡ ಪೊಲೀಸರು: ಇಬ್ಬರ ಬಂಧನ
ಧಾರವಾಡ, ಡಿಸೆಂಬರ್ 8: ಜಿಲ್ಲಾ ಪೊಲೀಸರು ಅಬಕಾರಿ ಕಾಯಿದೆ ಅಡಿಯಲ್ಲಿ ದಾಖಲಾಗಿದ್ದ ಪ್ರಮುಖ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರ ವಶದಿಂದ ಬೃಹತ್ ಪ್ರಮಾಣದ ಒಣಗಿದ ಮಾದಕ ಗಾಂಜಾವನ್ನು ಜಪ್ತಿ ಮಾಡುವ ಮೂಲಕ ಸ್ಪಿರಿಟ್ ಮತ್ತು ಮಾದಕವಸ್ತುಗಳ ಅಕ್ರಮ ಜಾಲವನ್ನು ಭೇದಿಸಿದ್ದಾರೆ.
ನವೆಂಬರ್ 24 ರಂದು ಮುಂಜಾನೆ ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ತೇಗೂರ ಗ್ರಾಮದ ಭಾರತ ಪ್ಯಾಲೇಸ್ ಹೋಟೆಲ್ ಬಳಿ ಅಕ್ರಮವಾಗಿ ಸ್ಪಿರಿಟ್ ಕ್ಯಾನುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ಎರಡು ವಾಹನಗಳಾದ (ಕೆಎ 19 ಎಬಿ 1930 ಮತ್ತು ಹೆಚ್‌ಆರ್ 38 ಡಬ್ಲೂ 7134) ಗಳಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 35 ಲೀಟರ್ ಸ್ಪಿರಿಟ್ ತುಂಬಿದ 844 ಕ್ಯಾನುಗಳನ್ನು ವಶಕ್ಕೆ ಪಡೆಯಲಾಯಿತು. ಇದರ ಅಂದಾಜು ಮೌಲ್ಯ ರೂ. 34,44,800/- ಆಗಿದ್ದು, ಜತೆಗೆ ಸಾಗಾಟಕ್ಕೆ ಬಳಸಿದ್ದ ರೂ. 36,00,000/- ಮೌಲ್ಯದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿತ್ತು.
ಈ ಸಂಬಂಧ ಆರೋಪಿತರಾದ ಕೇರಳ ಮೂಲದ ಸಜೀವ ಸದಾನಂದನ್ (44) ಮತ್ತು ಜಾಯ್ ರಾಮಚಂದ್ರ ಕಿಜಾಕತ್ (66) ಇವರ ವಿರುದ್ಧ ಗರಗ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಇಬ್ಬರು ಆರೋಪಿತರು ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದರು.
ಪರಾರಿಯಾಗಿದ್ದ ಆರೋಪಿಗಳ ಬೆಂಗಳೂರಿನಲ್ಲಿ ಬಂಧನ ಮತ್ತು ಗಾಂಜಾ ಜಪ್ತಿ:
ಪರಾರಿಯಾಗಿದ್ದ ಆರೋಪಿತರ ಪತ್ತೆಗಾಗಿ ಗುಂಜನ ಆರ್ಯ, ಐಪಿಎಸ್, ಪೊಲೀಸ್ ಅಧೀಕ್ಷಕರು, ಧಾರವಾಡ ಜಿಲ್ಲೆ ಇವರ ಮಾರ್ಗದರ್ಶನದಲ್ಲಿ, ಹಾಗೂ ಶಿವಾನಂದ ಕಟಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮತ್ತು ವಿನೋದ ಮುಕ್ತದಾರ, ಪೊಲೀಸ್ ಉಪಾಧೀಕ್ಷಕರು, ಧಾರವಾಡ ಗ್ರಾಮೀಣ ಉಪ ವಿಭಾಗ ಇವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಶಿವಯೋಗಿ ಲೋಹಾರ, ಸಿಪಿಐ, ಗರಗ ವೃತ್ತ ಮತ್ತು ಸಿದ್ರಾಮಪ್ಪ ಉನ್ನದ, ಪಿಎಸ್‌ಐ, ಗರಗ ಠಾಣೆ ಇವರ ನೇತೃತ್ವದ ತಂಡವು, ಆರೋಪಿಗಳು ತಮ್ಮ ವಾಸಸ್ಥಳದಲ್ಲಿ ಸ್ಪಿರಿಟ್ ಹಾಗೂ ಇನ್ನಿತರೆ ನಿಷೇಧಿತ ವಸ್ತುಗಳನ್ನು ಸಂಗ್ರಹಿಸಿರಬಹುದು ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿತು. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು, ಡಿಸೆಂಬರ್ 5 ರಂದು ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಕೆಹೆಚ್‌ಬಿ ನಿವೇಶನದಲ್ಲಿ ಆರೋಪಿತರು ವಾಸವಿದ್ದ ಬಾಡಿಗೆ ಮನೆಗೆ ದಾಳಿ ಮಾಡಲಾಯಿತು.
ಈ ದಾಳಿಯ ಸಂದರ್ಭದಲ್ಲಿ, ಪರಾರಿಯಾಗಿದ್ದ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದು, ಮನೆ ಪರಿಶೀಲನೆ ನಡೆಸಿದಾಗ ಅವರ ವಶದಿಂದ ಒಟ್ಟು 51 ಕೆಜಿ 460 ಗ್ರಾಂ ಒಣಗಿದ ಮಾದಕ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಇದರ ಅಂದಾಜು ಮೌಲ್ಯ ರೂ. 12,86,500/- ಆಗಿದ್ದು, ಜೊತೆಗೆ ಗಾಂಜಾ ತೂಕ ಮಾಡುವ ಒಂದು ಡಿಜಿಟಲ್ ಯಂತ್ರ ಹಾಗೂ ಮೂರು ಮೊಬೈಲ್‌ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಬೆಂಗಳೂರಿನಿಂದ ಕರೆತಂದು, ದಸ್ತಗಿರಿ ನಿಯಮಗಳನ್ನು ಪಾಲಿಸಿ ಡಿಸೆಂಬರ್ 6 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ತಂಡಕ್ಕೆ ಶ್ಲಾಘನೆ:
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಎಸ್.ಪಿ. ಉನ್ನದ ಪಿಎಸ್‌ಐ, ಗರಗ ಪಿಎಸ್, ಬಸವರಾಜ ಯದ್ಧಲಗುಡ್ಡ ಪಿಎಸ್‌ಐ ಅಳ್ಳಾವರ ಪಿಎಸ್ ಹಾಗೂ ಸಿಬ್ಬಂದಿಗಳಾದ ಉಳವೀಶ ಆರ್. ಸಂಪಗಾಂವಿ, ವಿಜಯ ಉಪ್ಪಿನ, ಆರ್.ಕೆ. ಕೊಪ್ಪದ, ಪಿ.ಎಸ್. ಟಕ್ಕಳಕಿ, ಪ್ರಸಾದ ಬಡಿಗೇರ, ಸೋಮು ರಾಠೋಡ, ಮತ್ತು ಧಾರವಾಡ ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ವಿಠಲ ಡಂಗನವರ, ಪಿಸಿ, ರವೀಂದ್ರ ಪಟ್ಟೇದ್, ಪಿಸಿ, ರವರನ್ನೊಳಗೊಂಡ ತಂಡವು ಪ್ರಮುಖ ಪಾತ್ರ ವಹಿಸಿರುತ್ತಾರೆ. ಗಾಂಜಾ ಹಾಗೂ ಆರೋಪಿತರ ಬಂಧನದ ಈ ಮಹತ್ವದ ಕಾರ್ಯಕ್ಕಾಗಿ ಎಸ್ಪಿ ಗುಂಜನ್ ಆರ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ತಂಡದ ಕಾರ್ಯವನ್ನು ಪ್ರಶಂಸಿಸಿದ್ದಾರೆ.

