ಮಹಿಳಾ ಪ್ರಯಾಣಿಕರ ಅನುಕೂಲಕ್ಕೆ: ದಾಸ್ತಿಕೊಪ್ಪ ಬಸ್ ನಿಲ್ದಾಣದಲ್ಲಿ ತಡೆರಹಿತ ಬಸ್ ನಿಲುಗಡೆಗೆ ಎಸ್.ಆರ್. ಪಾಟೀಲರ ಆಗ್ರಹ

Spread the love

ಧಾರವಾಡ: ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ವಿದ್ಯಾರ್ಥಿನಿಯರು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಬಸ್ ನಿಲ್ದಾಣದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಯಿಂದ ಕಲಘಟಗಿಗೆ ಸಂಚರಿಸುವ ತಡೆರಹಿತ (Non-stop) ಬಸ್‌ಗಳಿಗೆ ನಿಲುಗಡೆ ನೀಡಲು ಕ್ರಮ ವಹಿಸಬೇಕೆಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅವರು ಒತ್ತಾಯಿಸಿದರು.

​ಶುಕ್ರವಾರದಂದು (ಡಿ.05) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾವಿರಾರು ಮಹಿಳಾ ಪ್ರಯಾಣಿಕರ ಮನವಿ

​ದಾಸ್ತಿಕೊಪ್ಪದಲ್ಲಿ ಸರ್ಕಾರಿ ಪದವಿ, ಪದವಿಪೂರ್ವ, ಐಟಿಐ ಮತ್ತು ಮೊರಾರ್ಜಿ ವಸತಿ ಶಾಲೆ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳಿವೆ. ದಿನನಿತ್ಯ ಸಾವಿರಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು, ನೌಕರರು ಮತ್ತು ವಿದ್ಯಾರ್ಥಿನಿಯರು ಹುಬ್ಬಳ್ಳಿ ಹಾಗೂ ಧಾರವಾಡದಿಂದ ಇಲ್ಲಿಗೆ ಸಂಚರಿಸುತ್ತಾರೆ. ಬಸ್ ನಿಲುಗಡೆ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗ್ರಾಮಸ್ಥರಿಂದ ಹಲವು ದಿನಗಳಿಂದ ಮನವಿ ಬಂದಿದೆ ಎಂದು ಪಾಟೀಲರು ತಿಳಿಸಿದರು.

​ತಾಲೂಕಾ ಅಧ್ಯಕ್ಷ ಬಸಪ್ಪ ಮಹಾಬಳೇಶ್ವರ ಬಾವಕಾರ ಅವರು ಮಾತನಾಡಿ, ಬೆಳಿಗ್ಗೆ 8:30 ರಿಂದ 9:30 ರವರೆಗೆ ಮತ್ತು ಸಂಜೆ 4:30 ರಿಂದ 5:30 ರವರೆಗೆ ಸಂಚರಿಸುವ ತಡೆರಹಿತ ಬಸ್‌ಗಳಿಗೆ ಕನಿಷ್ಠ ಈ ಸಮಯದಲ್ಲಾದರೂ ನಿಲುಗಡೆ ನೀಡಬೇಕು. ಈ ಕುರಿತು ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರಯಾಣಿಕರ ಅನುಕೂಲಕ್ಕಾಗಿ ಈ ಬಹುದಿನಗಳ ಬೇಡಿಕೆಯನ್ನು ತಕ್ಷಣ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಎಸ್.ಆರ್. ಪಾಟೀಲರು ಅಧಿಕಾರಿಗಳಿಗೆ ಸೂಚಿಸಿದರು.

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ

​ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತು ಚರ್ಚಿಸಲಾಯಿತು. ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಮತ್ತು ಕ್ಷೇತ್ರಮಟ್ಟದಲ್ಲಿ ಸಿಬ್ಬಂದಿಗಳ ಉತ್ತಮ ವರ್ತನೆ ಈ ಯೋಜನೆಗಳಿಗೆ ಯಶಸ್ಸು ತಂದುಕೊಡುತ್ತದೆ ಎಂದು ಪಾಟೀಲರು ಅಭಿಪ್ರಾಯಪಟ್ಟರು.

ಯುವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 10,019 ಅರ್ಜಿಗಳು ಸ್ವೀಕೃತವಾಗಿದ್ದು, 7,920 ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ 19.95 ಕೋಟಿ ರೂ. ಸಹಾಯಧನ ಜಮೆಯಾಗಿದೆ. ಯುವ ನಿಧಿ ಫಲಾನುಭವಿಗಳಿಗೆ ಕೌಶಲ್ಯ ಅಭಿವೃದ್ಧಿಗಾಗಿ ‘ಯುವನಿಧಿ ಪ್ಲಸ್’ ಕಾರ್ಯಕ್ರಮದಡಿ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಪ್ರಮುಖ ಯೋಜನೆಗಳ ಪ್ರಗತಿ (ಧಾರವಾಡ ಜಿಲ್ಲೆ):

  • ಶಕ್ತಿ ಯೋಜನೆ: ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 53 ಕೋಟಿಗೂ ಅಧಿಕ (53,00,41,042) ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದಕ್ಕಾಗಿ ಸರ್ಕಾರದಿಂದ ಸುಮಾರು 1322.69 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
  • ಗೃಹ ಜ್ಯೋತಿ: 5,18,710 ಫಲಾನುಭವಿಗಳಿದ್ದು, 61570.25 ಲಕ್ಷ ರೂ. ಬಿಡುಗಡೆಯಾಗಿದೆ.
  • ಗೃಹಲಕ್ಷ್ಮಿ ಯೋಜನೆ: 4,04,848 ಫಲಾನುಭವಿಗಳಿಗೆ ಒಟ್ಟು 1663.87 ಕೋಟಿ ರೂ. ಬಿಡುಗಡೆಯಾಗಿದೆ.
  • ಅನ್ನಭಾಗ್ಯ ಯೋಜನೆ: 3,62,516 ಫಲಾನುಭವಿಗಳಿದ್ದು, 358.29 ಲಕ್ಷ ರೂ. ವೆಚ್ಚ ಮಾಡಲಾಗಿದೆ.

​ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಮತ್ತು ಯೋಜನೆಗಳ ಸೌಲಭ್ಯಗಳು ದುರುಪಯೋಗವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

​ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ಮುರಗಯ್ಯಾ ವಿರಕ್ತಮಠ, ರೇಹನ್ ರಝಾ ಐನಾಪೂರಿ, ರತ್ನಾ ತೇಗೂರಮಠ, ಸುಧೀರ ಎಸ್. ಬೋಳಾರ ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *