ಪ್ರತಿಯೊಬ್ಬ ಪ್ರಜೆಗೂ ಘನತೆಯ ಜೀವನ ಕೊಟ್ಟಿದ್ದು ಸಂವಿಧಾನ: ಬಸವರಾಜ ಚಿಕ್ಕೂರ

Spread the love

ಧಾರವಾಡ: ಜಗತ್ತಿನಲ್ಲಿಯೇ ಭಾರತದ ಸಂವಿಧಾನ ವಿಶಿಷ್ಟವಾಗಿದ್ದು, ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ನಮ್ಮ ಸಂವಿಧಾನವು ಘನತೆಯ ಜೀವನವನ್ನು ಕಟ್ಟಿಕೊಟ್ಟಿದೆ ಎಂದು ಧಾರವಾಡದ ಶಹರ ಶಿಕ್ಷಣ ಸಮನ್ವಯನಾಧಿಕಾರಿ ಬಸವರಾಜ ಚಿಕ್ಕೂರ ಹೇಳಿದರು.

​ನಗರದ ಆಲೂರು ವೆಂಕಟರಾವ್ ಭವನದಲ್ಲಿ ಮಾರಿಯಾ ಗ್ರಾಮೀಣ ಮಹಿಳಾ ಮತ್ತು ಮಕ್ಕಳ ಸಾಂಸ್ಕೃತಿಕ ಸಂಘ ಹಾಗೂ ರಂಗ ಸಾಮ್ರಾಟ ಸಂಸ್ಥೆ ವತಿಯಿಂದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮಕ್ಕಳ ಹಬ್ಬ ಮತ್ತು ಸಂವಿಧಾನ ದಿವಸ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಕೆ. ಹೆಚ್. ನಾಯಕ, ಸಂವಿಧಾನವು ಯಾವುದೇ ಒಂದು ವರ್ಗದ ಜನರಿಗಾಗಿ ಅಲ್ಲ, ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕನಿಗಾಗಿ ಇರುವ ಮೂಲ ಕಾನೂನು. ಡಾ. ಬಿ. ಆರ್. ಅಂಬೇಡ್ಕರ್ ಅವರು ಹಿಂದುಳಿದ ಅಥವಾ ದಲಿತ ನಾಯಕರಲ್ಲ, ಬದಲಾಗಿ ಎಲ್ಲಾ ಜನಾಂಗದ ನಾಯಕರು. ಅವರು ರಚಿಸಿದ ಸಂವಿಧಾನದಿಂದ ಸಮಾಜದ ಕಟ್ಟ ಕಡೆಯ ಶೋಷಿತರಿಂದ ಹಿಡಿದು ಮೇಲ್ವರ್ಗದ ಪ್ರತಿಯೊಬ್ಬರಿಗೂ ಸಮಾನತೆ ದೊರಕಿದೆ ಎಂದು ಹೇಳಿದರು.

​ದೈಹಿಕ ಶಿಕ್ಷಣ ಉಪನ್ಯಾಸಕರಾದ ಪ್ರಕಾಶ ಕಂಬಳಿ ಮಾತನಾಡಿ, ಸಂವಿಧಾನ ಎಲ್ಲ ಜಾತಿ, ಧರ್ಮ, ಭಾಷೆ, ಲಿಂಗ, ಪ್ರದೇಶದ ಜನರಿಗೂ ಸಮಾನ ಹಕ್ಕು, ಅವಕಾಶ ಮತ್ತು ನ್ಯಾಯ ನೀಡುವ ಸರ್ವಶ್ರೇಷ್ಠ ಸಮರ್ಪಿತ ಗ್ರಂಥವಾಗಿದೆ ಎಂದು ನುಡಿದರು. ಮತ್ತೊಬ್ಬ ಅತಿಥಿಗಳಾದ ಎಂ. ಎಂ. ಚಿಕ್ಕಮಠ ಮಾತನಾಡಿ, ನವೆಂಬರ್ 26 ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಹೆಮ್ಮೆಯ ದಿನವಾಗಿದ್ದು, ಸಮಾನತೆಯ ಹಕ್ಕು, ಮುಕ್ತವಾಗಿ ಬದುಕುವ ಹಕ್ಕು ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ನೀಡುವ ದಾಖಲೆ ರಚನೆಯಾದ ದಿನವಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಕರೆ ನೀಡಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಯಲಕ್ಷ್ಮಿ ಹೆಚ್ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

​ಕಾರ್ಯಕ್ರಮದಲ್ಲಿ ಪ್ರಮೀಳಾ ಜಕ್ಕನ್ನವರ, ಶಿವಾನಂದ ಹಡಪದ, ಮೌನೇಶ್ ಕಮ್ಮಾರ, ಸಂತೋಷ್ ಕರಿಮಳ್ಳಣ್ಣವರ, ಡಾ. ಅಲ್ಲಾಭಕ್ಷ ಮಕಾಂದರ, ಯಲ್ಲಪ್ಪ ಬೆಂಡಿಗೇರಿ ಮತ್ತು ಸಿಕಂದರ ದಂಡಿನ ಉಪಸ್ಥಿತರಿದ್ದರು. ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಂಗೋಲಿ, ಚಿತ್ರಕಲೆ, ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಲಕ್ಷ್ಮಿ ಜಾಧವ ಅವರು ನಿರೂಪಣೆ ಮಾಡಿದರು. ಜೀವಿತಾ ಎಸ್. ಹೊಳೆಆಲೂರ ಪ್ರಾರ್ಥನೆಯನ್ನು, ಶೃತಿ ಹುರುಳಿಕೊಪ್ಪ ಸ್ವಾಗತವನ್ನು ನೆರವೇರಿಸಿದರು.

Leave a Reply

Your email address will not be published. Required fields are marked *