ಕೃಷಿ ಭೂಮಿಯ ಮೇಲೆ ಕರಾಳ ನೆರಳು: ಕುಂದಗೋಳದಲ್ಲಿ 79 ಅನಧಿಕೃತ ಆಸ್ತಿ ಪತ್ತೆ!

Spread the love


🌾 ಕೃಷಿ ಭೂಮಿಯ ಮೇಲೆ ಕರಾಳ ನೆರಳು: ಕುಂದಗೋಳದಲ್ಲಿ 79 ಅನಧಿಕೃತ ಆಸ್ತಿ ಪತ್ತೆ


ಲಾಭದ ಆಸೆಗೆ ಸರ್ಕಾರಿ ನಿಯಮ ಗಾಳಿಗೆ ತೂರಿದ ಬಂಡವಾಳಶಾಹಿಗಳು: ಅನ್ನದಾತ ಕಂಗಾಲು

ಕುಂದಗೋಳ: ವಾಣಿಜ್ಯ ರಾಜಧಾನಿ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ತಾಗಿಕೊಂಡಿರುವ ಕುಂದಗೋಳ ಪಟ್ಟಣವು ನಿರಂತರ ಆರ್ಥಿಕವಾಗಿ ಬೆಳೆಯುತ್ತಿರುವಂತೆಯೇ, ಇದರ ಕೃಷಿ ಭೂಮಿಯ ಮೇಲೆ ಇದೀಗ ಬಂಡವಾಳಶಾಹಿಗಳ ಕರಾಳ ನೆರಳು ಆವರಿಸಿದೆ. ಅನ್ನ ಬೆಳೆಯುವ ನೆಲವನ್ನೇ ಗುರಿಯಾಗಿಸಿಕೊಂಡಿರುವ ಕೆಲ ಭೂಗಳ್ಳರು ಮತ್ತು ಬಂಡವಾಳಶಾಹಿಗಳು, ರೈತರಿಗೆ ಹಣದ ಆಮಿಷವೊಡ್ಡಿ ಕೃಷಿ ಭೂಮಿಯನ್ನು ಯಾವುದೇ ಕಾನೂನುಬದ್ಧ ಭೂ ಪರಿವರ್ತನೆ ಮಾಡದೇ ಬೇಕಾಬಿಟ್ಟಿಯಾಗಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ.
ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಕೃಷಿ ಜಮೀನುಗಳಲ್ಲಿ ಪ್ಲಾಟ್‌ಗಳನ್ನು ಹಾಕಿ, ಗೋದಾಮುಗಳನ್ನು ನಿರ್ಮಿಸಿ, ಅಂಗಡಿ ಮುಂಗಟ್ಟುಗಳನ್ನು ಕಟ್ಟುತ್ತಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮಗಳಿಂದಾಗಿ ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೇ ಬರೋಬ್ಬರಿ 79 ಅನಧಿಕೃತ ಆಸ್ತಿಗಳು ಪತ್ತೆಯಾಗಿವೆ. ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ವಿ. ಕುಲಕರ್ಣಿ ಅವರು ಮಾಹಿತಿ ನೀಡಿದ್ದು, ಕಂದಾಯ ಕೃಷಿ ಭೂಮಿಯನ್ನು ಯಾವುದೇ ನಿಯಮ ಪಾಲಿಸದೆ, ಅನಧಿಕೃತವಾಗಿ ಪರಿವರ್ತನೆ ಮಾಡಲಾಗಿದೆ ಎಂದು ಖಚಿತಪಡಿಸಿದ್ದಾರೆ.

ಕುಂದಗೋಳ ತಾಲ್ಲೂಕು 61.665 ಹೆಕ್ಟೇರ್ ಕೃಷಿ ಭೂಮಿ ಹೊಂದಿದೆ. ಆದರೆ, ಇದೀಗ ಬಹುತೇಕ ಫಲವತ್ತಾದ ಕೃಷಿ ಭೂಮಿ ಹಣದ ಆಸೆಗೆ ಬಲಿಯಾಗಿ, ಬಂಡವಾಳ ಶಾಹಿಗಳ ವಾಣಿಜ್ಯ ಕಪ್ಪು ನೆರಳಿನಿಂದ ಆವರಿಸಿದೆ. ಅನ್ನ ಬೆಳೆಯುವ ಜಮೀನನ್ನು ಕಮರ್ಷಿಯಲ್ ಜಾಗವನ್ನಾಗಿ ಪರಿವರ್ತಿಸುತ್ತಿರುವ ಈ ಅಕ್ರಮದ ವಿರುದ್ಧ ಪಟ್ಟಣ ಪಂಚಾಯಿತಿ, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಗಳು ಬಹುತೇಕ ಮೌನ ತಾಳಿರುವುದು ರೈತ ಸಮುದಾಯದ ಆತಂಕಕ್ಕೆ ಕಾರಣವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ತನ್ನ ಜೀವನದ ಆಧಾರವಾದ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಅನ್ನದಾತನು ಏನು ಮಾಡಬೇಕು? ಲಾಭಕೋರರ ದುರಾಸೆಗೆ ಬಲಿಯಾಗುತ್ತಿರುವ ಕೃಷಿ ಭೂಮಿಯ ಸಂರಕ್ಷಣೆ ಹೇಗೆ? ಈ ಅಕ್ರಮಗಳು ಹೀಗೆಯೇ ಮುಂದುವರಿದರೆ ಆಹಾರ ಉತ್ಪಾದನೆಯ ಮೇಲೆ ಇದರ ಪರಿಣಾಮ ಭೀಕರವಾಗಬಹುದು. ಇನ್ನಾದರೂ ಧಾರವಾಡ ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಈ ಗಂಭೀರ ಸಮಸ್ಯೆಯ ಕಡೆ ಗಮನಹರಿಸಿ, ರೈತರ ಪರವಾಗಿ ನಿಂತು, ಈ ಕರಾಳ ಭೂ ಅಕ್ರಮಗಳಿಗೆ ಕಡಿವಾಣ ಹಾಕುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *