ಪಿಒಪಿ ಗಣೇಶ ಮೂರ್ತಿ ತಯಾರಿಕಾ ಕೇಂದ್ರಗಳ ಮೇಲೆ ಟಾಸ್ಕ್ ಫೋರ್ಸ್ ದಾಳಿ, ಸಂಶಾತ್ಮಕವಾಗಿ ಇರುವ 10 ಮೂರ್ತಿಗಳ ವಶ ಮಾದರಿ ಪರಿಶೀಲನೆಗೆ ರವಾನೆ

Spread the love

ಪಿಒಪಿ ಗಣೇಶ ಮೂರ್ತಿ ತಯಾರಿಕಾ ಕೇಂದ್ರಗಳ ಮೇಲೆ ಟಾಸ್ಕ್ ಫೋರ್ಸ್ ದಾಳಿ, ಸಂಶಾತ್ಮಕವಾಗಿ ಇರುವ 10 ಮೂರ್ತಿಗಳ ವಶ ಮಾದರಿ ಪರಿಶೀಲನೆಗೆ ರವಾನೆ

ಕುಂದಗೋಳ: ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ತಡೆಯಲು ಕುಂದಗೋಳ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ತಹಶೀಲ್ದಾರ ರಾಜು ಮಾವರಕರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ವಿ. ಕುಲಕರ್ಣಿ, ಸಿಪಿಐ ಶಿವಾನಂದ ಅಂಬಿಗೇರ ಸೇರಿದಂತೆ ವಿವಿಧ ಅಧಿಕಾರಿಗಳಿದ್ದ ಟಾಸ್ಕ್ ಫೋರ್ಸ್ ತಂಡವು ಪಟ್ಟಣದ ಮೂರು ಗಣೇಶ ಮೂರ್ತಿ ತಯಾರಿಕಾ ಕೇಂದ್ರಗಳ ಮೇಲೆ ಶನಿವಾರದಂದು ದಿಢೀರ್ ದಾಳಿ ನಡೆಸಿತು.

ದಾಳಿಯ ವೇಳೆ, ಶಿವಾಜಿ ನಗರದ ಕಿಲ್ಲಾ ಓಣಿಯಲ್ಲಿನ ಒಂದು ಗಣೇಶ ಮೂರ್ತಿ ತಯಾರಿಕಾ ಘಟಕದಲ್ಲಿ ಸಂಶಯಾಸ್ಪದವಾಗಿರುವ 10 ಪಿಒಪಿ ಗಣೇಶ ಮೂರ್ತಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಮೂರ್ತಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ರಾಜು ಮಾವರಕರ ತಿಳಿಸಿದ್ದಾರೆ.

ದಾಳಿಯ ನಂತರ ಮಾತನಾಡಿದ ತಹಶೀಲ್ದಾರರು, “ಸರ್ಕಾರದ ಆದೇಶದಂತೆ ತಾಲ್ಲೂಕಿನಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಈಗಾಗಲೇ ನೋಟಿಸ್‌ಗಳನ್ನು ನೀಡಲಾಗಿದೆ. ಆದರೂ ಈ ಚಟುವಟಿಕೆ ನಡೆಯುತ್ತಿರುವುದು ಗಂಭೀರ ಸಂಗತಿಯಾಗಿದೆ. ಪಿಒಪಿ ಮೂರ್ತಿಗಳು ಜಲಮೂಲಗಳನ್ನು ಕಲುಷಿತಗೊಳಿಸಿ ಪರಿಸರಕ್ಕೆ ತೀವ್ರ ಹಾನಿ ಮಾಡುತ್ತವೆ. ಇನ್ನು ಮುಂದೆ ಇಂತಹ ಘಟನೆಗಳು ಕಂಡುಬಂದರೆ, ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಈ ಬಾರಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸಬೇಕೆಂದು ಆಡಳಿತವು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಪಿಎಸ್ಐ ಇಮ್ರಾನ್ ಪಠಾಣ, ಪಪಂ ಸದಸ್ಯ ಗಣೇಶ ಕೋಕಾಟೆ, ಪಪಂ ಆರೋಗ್ಯ ಅಧಿಕಾರಿ ಜಾನಕಿ ಬಳ್ಳಾರಿ, ಹಾಗೂ ಪಪಂ ಸಿಬ್ಬಂದಿ ಫಕ್ಕೀರಪ್ಪ ಚೂರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪೋಟೋ: ಕೆ ಎನ್ ಡಿ 01
ಪಟ್ಟಣದ ‌ಪಿಒಪಿ ಗಣೇಶ ಮೂರ್ತಿಗಳ ತಯಾರಿಕಾ ಘಟಕಕ್ಕೆ ಟಾಸ್ಕ್ ಫೋರ್ಸ್ ಸಮೀತಿ ಭೇಟಿ ನೀಡಿ ಸಂಶಾತ್ಮಕವಾಗಿ ಇರುವ ಪಿಒಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿತು.

Leave a Reply

Your email address will not be published. Required fields are marked *