
ಕುಂದಗೋಳ: ನವ್ಹಂಬರ 30 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.
ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರ ನವಂಬರ್ 30 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

