
ಧಾರವಾಡ, ನ. 10: ಗ್ರಾಮೀಣ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆ ಆಗುವ ಅನುದಾನದ ಪ್ರತಿ ಪೈಸೆ ಸದ್ಬಳಕೆಯಾಗಬೇಕು. ಅಭಿವೃದ್ಧಿ ಕಾಮಗಾರಿಗಳಲ್ಲಿ ತಾರತಮ್ಯ ಮಾಡದೆ ಎಲ್ಲರನ್ನು ಸಮಾನವಾಗಿ ಕಾಣಬೇಕು. ಅಂದಾಗ ಮಾತ್ರ ಅಭಿವೃದ್ಧಿಗೆ ವೇಗ ಮತ್ತು ಜನಸ್ಪಂದನೆ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಅವರು ಹೇಳಿದರು. ಅವರು ಸೋಮವಾರದಂದು ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಗಾವಿ ವಿಭಾಗ ಮಟ್ಟದ ಎಲ್ಲ ಜಿಲ್ಲೆಗಳ 2026-27 ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಸ್ವರಾಜ್ಯ ಮತ್ತು ಯೋಜನೆಗಳ ವಿಕೇಂದ್ರೀಕರಣ
ಗಾಂಧೀಜಿಯವರ ಸ್ವರಾಜ್ಯದ ಕನಸು ನನಸು ಮಾಡುವ ಜವಾಬ್ದಾರಿ ನಮ್ಮ ಮೇಲಿದ್ದು, ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಡಿ.ಆರ್. ಪಾಟೀಲರು ಕರೆ ನೀಡಿದರು. ‘ನಮ್ಮ ಅಭಿವೃದ್ಧಿ ನಮ್ಮ ಸಹಭಾಗಿತ್ವದಲ್ಲಿ’ ಎಂಬ ಬಲವಾದ ನಂಬಿಕೆ ಜನರಲ್ಲಿ ಮೂಡಲು ಯೋಜನೆಗಳ ವಿಕೇಂದ್ರೀಕರಣ ಮತ್ತು ಅಧಿಕಾರದ ವಿಕೇಂದ್ರೀಕರಣ ಆಗಬೇಕು. ಅಂದಾಗ ಪಂಚಾಯತ್ ರಾಜ್ಯ ವ್ಯವಸ್ಥೆಗೆ ಸೂಕ್ತ ಸ್ವರೂಪ ಬರುತ್ತದೆ. ಯೋಜನೆಗಳು ಅಧಿಕಾರಿಗಳ ಹಂತದಲ್ಲಿ ರೂಪಿತವಾಗಬಾರದು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಯೋಜನೆಗಳು ರಚನೆಯಾಗಬೇಕು ಮತ್ತು ಜನರ ಬೇಡಿಕೆಗಳಿಗೆ ಸ್ಪಂದಿಸುವ ಯೋಜನೆಗಳು ದೀರ್ಘಕಾಲಿಕ ಬಾಳಿಕೆ ಬರುತ್ತವೆ ಎಂದು ಒತ್ತಿ ಹೇಳಿದರು. ಅಲ್ಲದೆ, ಬರುವ ಮಾರ್ಚ್ 31 ರೊಳಗೆ ಬೆಳಗಾವಿ ವಿಭಾಗದ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಸಿಗಬೇಕು. ಇದು ಮೂಲಸೌಕರ್ಯವಾಗಿದ್ದು, ಇದಕ್ಕೆ ಆದ್ಯತೆ ನೀಡಬೇಕು ಎಂದರು. ಚಕ್ಕಡಿ ದಾರಿ ನಿರ್ಮಾಣದಲ್ಲಿ ನವಲಗುಂದ ಶಾಸಕರು ಮತ್ತು ಧಾರವಾಡ ಗ್ರಾಮೀಣ ಶಾಸಕರ ಕಾರ್ಯಗಳು ಮಾದರಿಯಾಗಿವೆ ಎಂದು ಅವರು ಶ್ಲಾಘಿಸಿದರು.
ಪ್ರತಿ ತಿಂಗಳ 4ನೇ ರವಿವಾರ ಸ್ವಚ್ಛತಾ ದಿನ
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವುದು ಮುಖ್ಯ. ಯೋಜನಾ ಹಂತದಲ್ಲಿ ಪ್ರತಿಯೊಬ್ಬರಿಗೂ ಇಚ್ಛಾಶಕ್ತಿ ಇರಬೇಕು ಮತ್ತು ಗ್ರಾಮ ಸ್ವರಾಜ್ಯವು ಪಾರದರ್ಶಕವಾಗಿ ನಿಯಮಾನುಸಾರ ನಡೆಯಬೇಕು. ಯೋಜನಾ ಅನುಷ್ಠಾನದಲ್ಲಿ ಲಭ್ಯ ತಾಂತ್ರಿಕತೆಯನ್ನು ಬಳಸಿಕೊಂಡು ಜನರ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿಯ ಕರಡು ರೂಪಿಸಬೇಕು ಎಂದು ಹೇಳಿದರು. ಜನವರಿ ತಿಂಗಳಿನ 4ನೇ ರವಿವಾರದಂದು ಬೆಳಗಾವಿ ವಿಭಾಗದ ಪ್ರತಿ ಗ್ರಾಮ ಮತ್ತು ನಗರಗಳಲ್ಲಿ ಸ್ವಚ್ಛತಾ ವಾರ ಆಚರಿಸಬೇಕು. ಈ ಪರಂಪರೆಯನ್ನು ಮುಂದಿನ ಪ್ರತಿ ತಿಂಗಳ 4ನೇ ರವಿವಾರದಂದು ಅಧಿಕಾರಿಗಳು ಸಮುದಾಯದ ಸಹಭಾಗಿತ್ವದಲ್ಲಿ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶಗಳಿಂದ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ನವಲಗುಂದ ಶಾಸಕರಾದ ಎನ್. ಎಚ್. ಕೋನರಡ್ಡಿ ಅವರು ಮಾತನಾಡಿ, ಸ್ಥಳೀಯ ಸಂಸ್ಥೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ, ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಲು ಶಾಸಕರೊಂದಿಗೆ ಮತ್ತು ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕೈ ಜೋಡಿಸಬೇಕು. ರಾಜ್ಯಕ್ಕೆ ಮಾದರಿಯಾಗಿರುವ ಹೊಲದ ರಸ್ತೆಯು ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 300 ಕಿ.ಮೀ.ಗಳಷ್ಟು ಆಗಿದೆ ಎಂದು ಮಾಹಿತಿ ನೀಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಇದರ ಪರಿಣಾಮಕಾರಿ ಬಳಕೆಯಾಗಬೇಕು ಎಂದು ಹೇಳಿದರು.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸರಿಯಾಗಿ ಯೋಜನೆಗಳ ಅನುಷ್ಠಾನ ಆಗುವುದರಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಸಾರ್ವಜನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಹೋಗುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಜಿಲ್ಲಾ ಅಭಿವೃದ್ಧಿ ಯೋಜನೆಯ ಕರಡು ವರದಿ ಸಿದ್ಧಗೊಳಿಸಲಾಗುತ್ತಿದ್ದು, ವಿಕೇಂದ್ರೀಕರಣವನ್ನು ಸಫಲಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಗದಗ, ಉತ್ತರ ಕನ್ನಡ, ಬೆಳಗಾವಿ ಜಿಲ್ಲಾಧಿಕಾರಿಗಳು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಧಾರವಾಡ ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ ಹಾಗೂ ಬೆಳಗಾವಿ ವಿಭಾಗದ ವಿವಿಧ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

