ಕ.ವಿ.ವ. ಸಂಘವು ಕನ್ನಡದ ಬೇರು ಗಟ್ಟಿಗೊಳಿಸುವ ಪ್ರಾತಿನಿಧಿಕ ಸಂಸ್ಥೆ: ಡಾ. ಮಹೇಶ ವಾಳ್ವೇಕರ ಅಭಿಮತ

Spread the love


ಧಾರವಾಡ: ಕನ್ನಡದ ಗುಡಿಯೆಂದೇ ಖ್ಯಾತಿ ಪಡೆದಿರುವ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡದ ಬೇರನ್ನು ಗಟ್ಟಿಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಈ ಸಂಘವು ನಿಜ ಅರ್ಥದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತರಾದ ಡಾ. ಮಹೇಶ ವಾಳ್ವೇಕರ ಅವರು ಅಭಿಪ್ರಾಯಪಟ್ಟರು. ಅವರು ಶನಿವಾರದಂದು ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ 70ನೇ ರಾಜ್ಯೋತ್ಸವ ನಾಡಹಬ್ಬ-2025 ನಿಮಿತ್ತದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕವಿವ ಸಂಘವು ಕನ್ನಡ ಭಾಷೆ, ನೆಲ ಮತ್ತು ಗಡಿ ವಿಷಯದಲ್ಲಿ ಅನ್ಯಾಯವಾದಾಗಲೆಲ್ಲಾ ಕನ್ನಡಪರ ಧ್ವನಿ ಎತ್ತಿ ಕನ್ನಡಿಗರಿಗೆ ನ್ಯಾಯ ಒದಗಿಸಿದ ಇತಿಹಾಸ ಹೊಂದಿದೆ ಎಂದು ಸ್ಮರಿಸಿದ ವಾಳ್ವೇಕರ ಅವರು, ಕನ್ನಡಿಗರಾದ ನಾವು ನಮ್ಮ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಉದಾಸೀನ ಮನೋಭಾವ ಹೊಂದಬಾರದು ಎಂದು ಎಚ್ಚರಿಸಿದರು. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ.21 ರಷ್ಟಿದ್ದರೆ, ಅನ್ಯ ಭಾಷಿಕರ ಸಂಖ್ಯೆ ಶೇ.79 ರಷ್ಟಿದೆ. ಕನ್ನಡದ ನೆಲದಲ್ಲಿ ಕನ್ನಡಿಗರ ಮನಸ್ಸು ಒಂದಾಗಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಕವಿವ ಸಂಘವು ತನ್ನ ಕಾರ್ಯ ಚಟುವಟಿಕೆಗಳನ್ನು ದಕ್ಷಿಣ ಕರ್ನಾಟಕದ ಕಡೆಗೂ ವಿಸ್ತರಿಸಬೇಕು. ಅಂದಾಗ ಮಾತ್ರ ಕನ್ನಡಿಗರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ, ಸಾರ್ವಜನಿಕರು ಸರ್ಕಾರದ ಯೋಜನೆಗಳು, ರೂಪರೇಷೆಗಳು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿ ಕೇಳಿದಾಗ, ತಾವೊಬ್ಬ ಮಾಹಿತಿ ಆಯುಕ್ತರಾಗಿ ಸಾರ್ವಜನಿಕರ ಹಾಗೂ ಸರ್ಕಾರದ ನಡುವೆ ಸಮನ್ವಯತೆಯ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಹು-ಧಾ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರಾದ ಅರವಿಂದ ಜಮಖಂಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡವು ಶಕ್ತಿಯುತ ಭಾಷೆಯಾಗಿದ್ದು, ಅದರ ಉಳಿವಿಗಾಗಿ ನಾವೆಲ್ಲಾ ಶಕ್ತಿಶಾಲಿಗಳಾಗಿ ದುಡಿಯಬೇಕು. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಉದಾತ ಭಾವನೆಯನ್ನು ಸಾಕಾರಗೊಳಿಸಲು ಯುವಕರು ಶ್ರದ್ಧೆ ಪೂರ್ವಕವಾಗಿ ಕಾರ್ಯ ಮಾಡಬೇಕೆಂದು ಕರೆ ನೀಡಿದರು. ಇದೇ ವೇಳೆ, ದಾಸ ಶ್ರೇಷ್ಠ ಭಕ್ತ ಕನಕದಾಸರ 534ನೇ ಜಯಂತಿ ಪ್ರಯುಕ್ತ ಗಣ್ಯರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಾರಂಭದಲ್ಲಿ ಡಾ. ಸದಾಶಿವ ಐಹೊಳೆ ಅವರಿಂದ ಸುಶ್ರಾವ್ಯ ಸಂಗೀತ ಕಾರ್ಯಕ್ರಮ ಜರುಗಿತು. ಇವರಿಗೆ ಪ್ರಸಾದ ಮಡಿವಾಳರ ಹಾಗೂ ತಂಡದವರು ತಬಲಾ ಸಾಥ್ ನೀಡಿದರು. ನಂತರ ಸೀತಾ ಛಪ್ಪರ ನೇತೃತ್ವದ ಅಭಿವ್ಯಕ್ತಿ ಕಲಾ ತಂಡದಿಂದ ನೃತ್ಯ ರೂಪಕ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ನೆರೆದವರ ಮನ ಸೆಳೆದವು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ವೇದಿಕೆಯಲ್ಲಿದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ಸನ್ಮಾನ ಪತ್ರ ವಾಚನ ಮಾಡಿದರು. ಡಾ. ಮಹೇಶ ಧ. ಹೊರಕೇರಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಅ. ಹಡಗಲಿ, ಗುರು ಹಿರೇಮಠ, ಡಾ. ಚಿದಾನಂದ ಮನ್ಸೂರ, ಎಸ್.ಬಿ. ಕೊಡ್ಲಿ, ಗಿರೀಶ ಪದಕಿ, ಬೆಂಗೇರಿ, ಎಂ.ಎ. ಚಿಕ್ಕಮಠ, ಡಾ. ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಶಿವಾನಂದ ಹೂಗಾರ ಸೇರಿದಂತೆ ಹಲವು ಗಣ್ಯರು ಹಾಗೂ ಕನ್ನಡಿಗರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *