ಧಾರವಾಡ: ನ. 07: ಕರ್ನಾಟಕ ಮಾಧ್ಯಮ ಅಕಾಡೆಮಿಯು 2025 ನೇ ಸಾಲಿನ ಹಿರಿಯ ಪತ್ರಕರ್ತರ ಗೌರವ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರತಿ ವರ್ಷದಂತೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ ಹಿರಿಯ ಪತ್ರಕರ್ತರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಗೌರವ ಪ್ರಶಸ್ತಿಗೆ ಅರ್ಹತೆ ಪಡೆಯಲು, ಪತ್ರಕರ್ತರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷಗಳ ಸೇವೆ ಸಲ್ಲಿಸಿರಬೇಕು ಮತ್ತು ಅವರಿಗೆ 50 ವರ್ಷ ಮೇಲ್ಪಟ್ಟಿರಬೇಕು. ಅರ್ಹ ಪತ್ರಕರ್ತರು ತಮ್ಮ ಹೆಸರು, ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ತಮ್ಮ ಸಾಧನೆಯ ಕಿರು ಪರಿಚಯವನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 20, 2025 ಕೊನೆಯ ದಿನಾಂಕವಾಗಿದ್ದು, ಅರ್ಜಿಯನ್ನು ಅಂಚೆಯ ಮೂಲಕ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ವಿಳಾಸಕ್ಕೆ ಕಳುಹಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

