ರಾಜ್ಯಮಟ್ಟದ ಪುರುಷರ ಲಾನ್ ಟೆನ್ನಿಸ್ ಪಂದ್ಯಾವಳಿಗೆ ಧಾರವಾಡ ಸಜ್ಜು: ನ. 7 ರಿಂದ 9 ರವರೆಗೆ ಪಂದ್ಯಾವಳಿ

Spread the love

ಧಾರವಾಡ : ನ.5: ಧಾರವಾಡ ಡಿಸ್ಟ್ರಿಕ್ಟ್ ಲಾನ್ ಟೆನ್ನಿಸ್ ಅಸೋಸಿಯೇಷನ್ (DDLTA) ವತಿಯಿಂದ ನವೆಂಬರ್ 7 ರಿಂದ 9 ರವರೆಗೆ ರಾಜ್ಯಮಟ್ಟದ ಪುರುಷರ ಲಾನ್ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಡಿಡಿಎಲ್‌ಟಿಎ ಕಾರ್ಯದರ್ಶಿ ಸಂತೋಷ ಶೆಟ್ಟಿ ಅವರು ತಿಳಿಸಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಕ್ರೀಡಾ ಚಟುವಟಿಕೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಧಾರವಾಡ ಸಜ್ಜಾಗಿದೆ.

​ಇಂದು (ನ.5) ಸಂಜೆ ಧಾರವಾಡ ಡಿಸ್ಟ್ರಿಕ್ಟ್ ಲಾನ್ ಟೆನ್ನಿಸ್ ಅಸೋಸಿಯೇಷನ್ ಕಚೇರಿ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತೋಷ ಶೆಟ್ಟಿ, ಪಂದ್ಯಾವಳಿಯು ನವೆಂಬರ್ 7 ರಂದು ಬೆಳಿಗ್ಗೆ 7 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಅವಳಿ ನಗರದ ಒಟ್ಟು 8 ಟೆನಿಸ್ ಕೋರ್ಟ್‌ಗಳಲ್ಲಿ ಪಂದ್ಯಗಳು ನಡೆಯಲಿದ್ದು, ಈಗಾಗಲೇ ಸುಮಾರು 260 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಆಟಗಾರರ ನೋಂದಣಿಗೆ ಇನ್ನೂ ಅವಕಾಶವಿದ್ದು, ಒಟ್ಟಾರೆ ಅಂದಾಜು 400 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ನವೆಂಬರ್ 7 ರಿಂದ 9 ರವರೆಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪಂದ್ಯಾವಳಿಗಳು ಜರಗಲಿವೆ.

​ಪಂದ್ಯಾವಳಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಉದ್ಘಾಟಿಸುವರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧ್ಯಕ್ಷತೆ ವಹಿಸಲಿದ್ದು, ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಕ್ಲೇ ಕೋರ್ಟ್ ಆವರಣವನ್ನು ಶಾಸಕ ಅರವಿಂದ ಬೆಲ್ಲದ ಅವರು ಉದ್ಘಾಟಿಸುವರು. ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

​ಉತ್ತರ ಕರ್ನಾಟಕ ಭಾಗದಲ್ಲಿ ಬಾಲಕ-ಬಾಲಕಿಯರಿಗೆ ಟೆನ್ನಿಸ್ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕಗಳನ್ನು ವಿತರಿಸಲಾಗುತ್ತದೆ. ಈಗಾಗಲೇ ಡಿಡಿಎಲ್‌ಟಿಎ ಆವರಣದಲ್ಲಿ ಸುಮಾರು 25ಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಟೆನ್ನಿಸ್ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಕಾರ್ಯದರ್ಶಿ ಸಂತೋಷ ಆರ್. ಶೆಟ್ಟಿ ಅವರು ತಿಳಿಸಿದರು. ಈ ರಾಜ್ಯಮಟ್ಟದ ಪಂದ್ಯಾವಳಿಗೆ ಹಲವಾರು ಸಂಘ ಸಂಸ್ಥೆಗಳು ಮತ್ತು ಕ್ರೀಡಾ ಅಭಿಮಾನಿಗಳು ಸಹಕಾರ ನೀಡುತ್ತಿದ್ದಾರೆ.

​ಪತ್ರಿಕಾಗೋಷ್ಠಿಯಲ್ಲಿ ಡಿಡಿಎಲ್‌ಟಿಎ ಖಜಾಂಚಿ ಸಂಪತ್ತ ಕುಬಸದ, ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ ಕುಲಕರ್ಣಿ ಮತ್ತು ವಿರೇಶ ಕೆಲಗೇರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *