ರೈತ ಸಂಘಟನೆಗಳ ಹೋರಾಟಕ್ಕೆ ಜಯ: ಕಬ್ಬು ಬೆಳೆಗಾರರಿಗೆ ಒಟ್ಟು ₹42 ಕೋಟಿ ದೊರಕಿದ ಸಂತಸ; ಸಚಿವ ಸಂತೋಷ್ ಲಾಡ್‌ಗೆ ಅಭಿನಂದನೆ

Spread the love

🌾 ರೈತ ಸಂಘಟನೆಗಳ ಹೋರಾಟಕ್ಕೆ ಜಯ: ಕಬ್ಬು ಬೆಳೆಗಾರರಿಗೆ ಒಟ್ಟು ₹42 ಕೋಟಿ ದೊರಕಿದ ಸಂತಸ; ಸಚಿವ ಸಂತೋಷ್ ಲಾಡ್‌ಗೆ ಅಭಿನಂದನೆ

ಕಲಘಟಗಿ : ಪಟ್ಟಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘಟನೆ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘಟನೆಯ ಪದಾಧಿಕಾರಿಗಳು ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಕಬ್ಬು ಬೆಳೆಗಾರರಿಗೆ ಒಟ್ಟು ₹42 ಕೋಟಿಗಳಷ್ಟು ಹಣವನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಘೋಷಿಸಿದರು. ಈ ಯಶಸ್ವಿ ಹೋರಾಟಕ್ಕೆ ಬೆಂಬಲ ನೀಡಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಆಡಳಿತಕ್ಕೆ ಸಂಘಟನೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ರಾಜ್ಯ ರೈತ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ, ಕಬ್ಬು ಬೆಳೆಗಾರರ ಸಂಘಟನೆ ಕಲಘಟಗಿ ಪದಾಧಿಕಾರಿಗಳು ಮತ್ತು ರೈತ ಬಾಂಧವರು ಪಾಲ್ಗೊಂಡಿದ್ದರು.

ಪ್ರಸಕ್ತ ಸಾಲಿಗೆ ಹೆಚ್ಚುವರಿ ₹16 ಕೋಟಿ ಲಭ್ಯ
ಕಬ್ಬು ಬೆಳೆಗಾರರ ಸಂಘಟನೆ ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಹಳಿಯಾಳ ಸಕ್ಕರೆ ಕಾರ್ಖಾನೆಯವರು ಕಬ್ಬಿನ ದರವನ್ನು ಆರಂಭದಲ್ಲಿ ಕೇವಲ ₹3,050 ಘೋಷಿಸಿ ಕಾರ್ಖಾನೆ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದರು. ಇದು ಎಫ್‌ಆರ್‌ಪಿ (ಕಾನೂನುಬದ್ಧ ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ದರಕ್ಕಿಂತಲೂ ಕಡಿಮೆಯಾಗಿತ್ತು.

ತಕ್ಷಣ ಎಚ್ಚೆತ್ತ ಸಂಘಟನೆಯು ಸಂಘಟಿತವಾಗಿ ಹೋರಾಟ ನಡೆಸಿದ ಪರಿಣಾಮವಾಗಿ, ಪ್ರತಿ ಟನ್‌ಗೆ ₹150 ಹೆಚ್ಚುವರಿಯಾಗಿ ಘೋಷಿಸಲು ಒತ್ತಾಯಿಸಲಾಯಿತು. ಈ ಹೋರಾಟದ ಫಲವಾಗಿ, ಕಲಘಟಗಿ ಮತ್ತು ಹಳಿಯಾಳ ಭಾಗದ ರೈತರಿಗೆ ಸುಮಾರು ₹16 ಕೋಟಿಗಳಷ್ಟು ಹೆಚ್ಚುವರಿ ಹಣ ದೊರಕುವಂತಾಯಿತು.

ಸಚಿವರಿಂದ ರೈತಪರ ಆದೇಶ, ಕೋರ್ಟ್‌ನಿಂದ ನಿರ್ದೇಶನ
ಇದಲ್ಲದೆ, ಕಳೆದ ವರ್ಷದ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಯವರು ಸುಮಾರು ₹256 ರಂತೆ ಹೆಚ್ಚುವರಿಯಾಗಿ ವಸೂಲಿ ಮಾಡಿದ್ದರು. ಈ ವಿಷಯವನ್ನು ಸಂಘಟನೆಯು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಗಮನಕ್ಕೆ ತಂದಿತ್ತು.

ಇದಕ್ಕೆ ಸ್ಪಂದಿಸಿದ ಸಚಿವರು, ಬೆಂಗಳೂರಿನ ವಿಕಾಸಸೌಧದಲ್ಲಿ ಸಂಘಟನೆ ಪದಾಧಿಕಾರಿಗಳು ಮತ್ತು ಸಕ್ಕರೆ ಆಯುಕ್ತರ ಸಭೆ ಕರೆದರು. ಹೆಚ್ಚುವರಿ ಬಿಲ್ಲನ್ನು ರೈತರಿಂದ ಪಡೆದುಕೊಂಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ, ಅದನ್ನು ರೈತರಿಗೆ ಮರಳಿಸುವಂತೆ ಸಚಿವರು ಕಾರ್ಖಾನೆಯ ನಿರ್ದೇಶಕರಿಗೆ ಖಡಕ್ಕಾಗಿ ಆದೇಶಿಸಿದರು.

ಸಕ್ಕರೆ ಕಾರ್ಖಾನೆಯವರು ಈ ವಿಷಯ ಕೋರ್ಟ್‌ನಲ್ಲಿದೆ ಎಂದು ಸುಮ್ಮನಾಗಿದ್ದರೂ, ಸಚಿವರು ಮತ್ತು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಸಂಬಂಧಪಟ್ಟ ಅಡ್ವೊಕೇಟ್ ಜನರಲ್‌ರನ್ನು ಸಂಪರ್ಕಿಸಲಾಯಿತು. ಇದರ ಪರಿಣಾಮವಾಗಿ, ಮಾನ್ಯ ಧಾರವಾಡದ ಉಚ್ಚ ನ್ಯಾಯಾಲಯವು ಸಕ್ಕರೆ ಕಾರ್ಖಾನೆಗೆ ₹10 ಕೋಟಿ ಡೆಪಾಸಿಟ್ ಮಾಡಲು ನಿರ್ದೇಶಿಸಿ ಆದೇಶ ನೀಡಿದೆ. ಇದರ ಮೂಲಕ ಕಳೆದ ಸಾಲಿನ ಹೆಚ್ಚುವರಿ ಹಣ ಸೇರಿ ಸುಮಾರು ₹26 ಕೋಟಿಗಳಷ್ಟು ಹಣ ರೈತರಿಗೆ ದೊರಕಿದಂತಾಗಿದೆ.

“ಎಲ್ಲಾ ಸಂಘಟನೆಗಳು ಮತ್ತು ರೈತ ಬಾಂಧವರು ಒಕ್ಕಟ್ಟಾಗಿ ಹೋರಾಡಿದರೆ ನ್ಯಾಯ ಪಡೆಯಲು ಸಾಧ್ಯವಿದೆ,” ಎಂದು ಸಂಘಟನೆ ತಿಳಿಸಿತು. ಈ ಪತ್ರಿಕಾಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘಟನೆ ಜಿಲ್ಲಾಧ್ಯಕ್ಷರಾದ ಮಹೇಶ ಬೆಳಗಾಂಕರ್, ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನ ಗುಡ್, ವಸಂತ ದಾಖಪ್ಪನವರ್, ಬಸವಣ್ಣಪ್ಪ ಅದರಗುಂಚಿ, ಸಿದ್ದನಗೌಡ ಬಸನಗೌಡ್ರು, ಶಿವು ತಡಸ, ಎಲ್ಲಪ್ಪ ತಳವಾರ್, ಸಹದೇವ್ ಕುಂಬಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *