
ಧಾರವಾಡ: ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ (ಕ.ವಿ.ವ. ಸಂಘ)ವು, 70ನೇ ಕರ್ನಾಟಕ ರಾಜ್ಯೋತ್ಸವ ನಾಡಹಬ್ಬ–2025ರ ಅಂಗವಾಗಿ ನವೆಂಬರ್ 1 ರಿಂದ 30ರವರೆಗೆ ತಿಂಗಳ ಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಂಡಿದೆ. ಈ ಕುರಿತು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸರಣಿಯ ಅಂಗವಾಗಿ, ನವೆಂಬರ್ 3, 2025ರಂದು ಬೆಳಿಗ್ಗೆ 11 ಗಂಟೆಗೆ ‘ಧರೆಗೆ ದೊಡ್ಡವರು’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬರೋಡಾದ ಅಂತಾರಾಷ್ಟ್ರೀಯ ಭಾಷಾ ತಜ್ಞರಾದ ಡಾ. ಗಣೇಶ ದೇವಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಧರೆಗೆ ದೊಡ್ಡವರು’ರಾಗಿ ವಿದ್ಯಾರ್ಥಿಗಳೊಂದಿಗೆ ಮಹತ್ವದ ಸಂವಾದ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರೇಮಲ್ಲೂರ ಈಶ್ವರನ್ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಿ. ಶಶಿಧರ ತೋಡಕರ ಅವರು ‘ಡಾ. ಗಣೇಶ ದೇವಿ ಅವರ ಬದುಕು–ಬರಹ’ ಕುರಿತು ಉಪಯುಕ್ತ ಮಾಹಿತಿ ನೀಡಲಿದ್ದಾರೆ. ಕಿಟೆಲ್ ಮಹಾವಿದ್ಯಾಲಯದ ಸುಮಾರು 300 ವಿದ್ಯಾರ್ಥಿಗಳು ಈ ಚರ್ಚೆ–ಸಂವಾದದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಜೊತೆಗೆ, ಸಿ.ವಾಯ್.ಸಿ.ಡಿ. ಕಲಾ ತಂಡ, ಹಲಾಪೂರ ಇವರು ಕನ್ನಡಪರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
ನಾಡಹಬ್ಬದ ಈ ವಿಶೇಷ ಸರಣಿಯಲ್ಲಿ ಆಸಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

