ಧಾರವಾಡ (ಅ. 31): ಜಿಲ್ಲಾ ಬಾಲಭವನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 9 ರಿಂದ 16 ವರ್ಷದೊಳಗಿನ ಮಕ್ಕಳಿಗೆ ವಿವಿಧ ಸೃಜನಾತ್ಮಕ ಮತ್ತು ಪ್ರದರ್ಶನ ಕಲೆಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳಿಗೆ ನವೆಂಬರ್ 7, 2025ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹಲವು ವಿಭಾಗಗಳಲ್ಲಿ ಸ್ಪರ್ಧೆಗಳು
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಮತ್ತು ಉತ್ತೇಜಿಸಲು ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಅವುಗಳಲ್ಲಿ ಮುಖ್ಯವಾಗಿ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ, ಯೋಗ ನೃತ್ಯ, ಮ್ಯಾಜಿಕ್, ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ ಮತ್ತು ವಿಜ್ಞಾನದಲ್ಲಿ ನೂತನ ಆವಿಷ್ಕಾರ ಮುಂತಾದ ಸ್ಪರ್ಧೆಗಳು ಸೇರಿವೆ.
ರಾಜ್ಯಮಟ್ಟದ ಕಲಾಶ್ರೀಗೆ ಪ್ರವೇಶ
ಈ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗುವ ಮಕ್ಕಳನ್ನು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಭಾಗವಹಿಸಲು ಕರೆದೊಯ್ಯಲಾಗುವುದು. ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸುವ ಮಕ್ಕಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಮಕ್ಕಳು ಕಚೇರಿ ವೇಳೆಯಲ್ಲಿ ತಮ್ಮ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ನವೆಂಬರ್ 7, 2025 ರೊಳಗಾಗಿ ಹೆಸರುಗಳನ್ನು ನೊಂದಾಯಿಸಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2447850, ಕಾರ್ಯಕ್ರಮ ಸಂಯೋಜಕರು ಶಶಿಧರ ಮುಂದಿನಮನಿ (7676756563) ಅಥವಾ ಕಚೇರಿ ಸಹಾಯಕಿ ನಿರ್ಮಲಾ ಭುಜಂಗನವರ (8951534958) ಅವರನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಬಾಲಭವನದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

