ಕುಂದಗೋಳ: ‘ಭ್ರಷ್ಟಾಚಾರಕ್ಕೆ ಒಳಗಾಗದೆ, ನಿಷ್ಠೆಯಿಂದ ಕೆಲಸ ನಿರ್ವಹಿಸಿ’ – ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಸವರಾಜ ಬುದ್ನಿ ಕರೆ

Spread the love

ಕುಂದಗೋಳ: ಲೋಕಾಯುಕ್ತ ಕಾಯ್ದೆಯ ವ್ಯಾಪ್ತಿ ಹೆಚ್ಚಾಗಿದ್ದು, ಸರ್ಕಾರಿ ಅಧಿಕಾರಿಗಳು ಮೈಯೆಲ್ಲ ಕಣ್ತ ತುಂಬಿಕೊಂಡು ಕೆಲಸ ನಿರ್ವಹಿಸಬೇಕು. ಯಾವುದೇ ಸಮಯದಲ್ಲಿ ಏನೆಲ್ಲಾ ಆಗಬಹುದು ಎಂದು ಊಹಿಸಲು ಸಾಧ್ಯವಿಲ್ಲ, ಮತ್ತು ಸಣ್ಣ ತಪ್ಪುಗಳೂ ಸಹ ವೇಗವಾಗಿ ಪ್ರಚಾರಗೊಳ್ಳುವ ಸಾಧ್ಯತೆ ಇದೆ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಸವರಾಜ ಬುದ್ನಿ ಅವರು ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬುಧವಾರದಂದು ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಕರ್ನಾಟಕ ಲೋಕಾಯುಕ್ತ ಧಾರವಾಡ ಇವರ ವತಿಯಿಂದ ಆಯೋಜಿಸಲಾಗಿದ್ದ ‘ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಸಪ್ತಾಹ–೨೦೨೫’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. “ಭ್ರಷ್ಟಾಚಾರ, ಲಂಚಗೂಳಿತನದಿಂದ ಸಿಲುಕಿ ಕೆಲಸ ಕಳೆದುಕೊಂಡು ಕುಟುಂಬಕ್ಕೆ ಸಮಸ್ಯೆ ಮಾಡಿಕೊಳ್ಳುವುದು ಬೇಡ. ಸರ್ಕಾರ ಸಂವಿಧಾನದ ಅಡಿಯಲ್ಲಿ ನೀಡಿರುವ ಸಮಯವನ್ನು ಭ್ರಷ್ಟಾಚಾರ ಮಾಡದೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಟ್ರ್ಯಾಪ್ ಕೇಸ್‌ಗಳಲ್ಲಿ ಸಣ್ಣಪುಟ್ಟ ಲಂಚ ತೆಗೆದುಕೊಂಡು ಕೆಲಸ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಒಳಗಾಗದೆ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಲಾದಷ್ಟು ಪ್ರಯತ್ನಿಸಬೇಕು ಹಾಗೂ ಸಾರ್ವಜನಿಕರಿಗೂ ಈ ಕುರಿತು ಮಾಹಿತಿ ನೀಡಬೇಕು,” ಎಂದು ಬಸವರಾಜ ಬುದ್ನಿ ಹೇಳಿದರು.

ನಂತರ ತಹಸೀಲ್ದಾರ್ ರಾಜು ಮಾವರಕರ ಅವರು ಭ್ರಷ್ಟಾಚಾರ ಮುಕ್ತ ಅಭಿಯಾನಕ್ಕೆ ಕೈಜೋಡಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ತಹಸೀಲ್ದಾರ್ ಅವರು ಬೋಧಿಸಿದ ಪ್ರತಿಜ್ಞೆ ಈ ಕೆಳಗಿನಂತಿತ್ತು:
“ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದೆಯೆಂದು ನಾನು ನಂಬುತ್ತೇನೆ. ಪ್ರತಿ ನಾಗರಿಕನು ಜಾಗರೂಕನಾಗಿದ್ದು, ಎಲ್ಲಾ ಸಮಯದಲ್ಲೂ ಉನ್ನತ ಗುಣಮಟ್ಟದ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿರಬೇಕೆಂದು ಅರಿತಿದ್ದೇನೆ. ಆದ್ದರಿಂದ ನಾನು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ; ಲಂಚವನ್ನು ಪಡೆಯುವುದಿಲ್ಲ ಹಾಗೂ ನೀಡುವುದೂ ಇಲ್ಲ; ಎಲ್ಲಾ ಕಾರ್ಯಗಳನ್ನು ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇನೆ; ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ; ವೈಯಕ್ತಿಕ ನಡವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವ ಮೂಲಕ ಮಾದರಿಯಾಗಿರುತ್ತೇನೆ; ಹಾಗೂ ಯಾವುದೇ ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ವರದಿ ಮಾಡುತ್ತೇನೆ.”

ತಹಸೀಲ್ದಾರ್ ಅವರು ಬೋಧಿಸಿದ ಈ ಪ್ರತಿಜ್ಞೆಯನ್ನು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೈ ಮುಂದೆ ಚಾಚಿ ಸ್ವೀಕರಿಸಿದರು.

ನಂತರ ಲೋಕಾಯುಕ್ತ ತಂಡವು ಪಟ್ಟಣದ ಹರಭಟ್ಟ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿತು. ಅಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಕರಣೇಶಗೌಡ ಜೇ ಅವರು ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ಕುರಿತು ಜಾಗೃತಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳಾದ ವಿ.ಎನ್. ದೇವನಾಯ್ಕಗೌಡ, ಮಂಜುನಾಥ ಶಿವನಾಯ್ಕರ, ಪರಪ್ಪ ಯಲ್ಲಟ್ಟಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *