ದೇಶಾಭಿಮಾನಕ್ಕೆ ಸೇವಾ ಮನೋಭಾವ ಬೆಳೆಸಿಕೊಳ್ಳಿ’: ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಕರೆ

Spread the love

ಕುಂದಗೋಳ: ಇಂದಿನ ಮಕ್ಕಳಲ್ಲಿ ನಮ್ಮ ದೇಶದ ಪ್ರಜ್ಞೆಯನ್ನು ಬೆಳೆಸುವ ದೃಷ್ಟಿಯಿಂದ ವಿದ್ಯಾರ್ಥಿಗಳು ನಿಸ್ವಾರ್ಥದಿಂದ ದೇಶಕ್ಕಾಗಿ ಶ್ರಮಿಸುವಂತಹವರಾಗಬೇಕು. ಭಾರತ ಮಾತೆಯ ಸೇವಕರಾದರೆ ಭಾರತದ ಒಳ್ಳೆಯ ರತ್ನಗಳಾಗಬಹುದು. ಆದ್ದರಿಂದ ಈ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಭಾವೈಕ್ಯತಾ ಸಂಸ್ಥಾನ ಮಠದ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಅವರು ತಾಲ್ಲೂಕಿನ ಸಂಶಿ ಗ್ರಾಮದ ಶ್ರೀ ಜ. ಫಕೀರೇಶ್ವರ ಮಠದಲ್ಲಿ ಶಿಕ್ಷಣ ಸಮಿತಿಯ ಕುಂದಗೋಳದ ಹರಭಟ್ಟ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಸಕ್ತ ವರ್ಷದ ರಾಷ್ಟ್ರೀಯ ಸೇವಾ ಯೋಜನಾ (ಎನ್‌ಎಸ್‌ಎಸ್) ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ನಂತರ ಗ್ರಾಮ ಪಂಚಾಯತಿ ಅಧ್ಯಕ್ಷ ಗಿರೀಶಗೌಡ ಪಾಟೀಲ ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸೇವಾ ಮನೋಭಾವವನ್ನು ಹೊಂದಬೇಕು. ಈ ರೀತಿಯ ಶಿಬಿರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಮತ್ತು ಈ ಶಿಬಿರಕ್ಕೆ ಗ್ರಾಮ ಪಂಚಾಯತಿಯಿಂದ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಕೆಎಲ್‌ಇ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಅಂದಾನೆಪ್ಪ ಉಪ್ಪಿನ ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ದೇಶಾಭಿಮಾನ ಮತ್ತು ಸೇವಾಭಿಮಾನವನ್ನು ಕಲಿಸುವ ಕಾರ್ಯ ಈ ಶಿಬಿರದ್ದಾಗಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷಣ ಸಮಿತಿಯ ಆಡಳಿತಾಧಿಕಾರಿ ಎಲ್.ಎಸ್. ಕೋನೇರಿ ಮತ್ತು ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಎಸ್.ಯು. ಅಕ್ಕಿ ಅವರು ಶಿಬಿರದ ಪ್ರಯೋಜನ ಮತ್ತು ತರಬೇತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ರಾಜು ಪುಟ್ಟಣ್ಣನವರ, ಸಂತೋಷಗೌಡ ಪಾಟೀಲ ಹಾಗೂ ಎ.ವೈ. ಭಜಂತ್ರಿ ಅವರು ಶಿಬಿರಾರ್ಥಿಗಳಿಗೆ ಟಿ-ಶರ್ಟ್‌ ಮತ್ತು ಕ್ಯಾಪ್ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ಪರಶುರಾಮ ಸೂಲದ, ಪಿ.ಎಂ. ಕೋರಿ, ಎಸ್.ವ್ಹಿ. ಸೈಬಣ್ಣನವರ, ಎಚ್.ಟಿ. ದೊಡ್ಡಮನಿ, ಬಿ.ಡಿ. ಕಲ್ಲಾರಿ, ಮಂಜು ಪೂಜಾರ, ಅಮಿತ ಉಪ್ಪಿನ, ಸವಿತಾ ಕಲ್ಲಣ್ಣನವರ ಸೇರಿದಂತೆ ಹಲವು ಗಣ್ಯರು ಹಾಗೂ ಶಿಬಿರಾರ್ಥಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *