ಕುಂದಗೋಳ: ‘ಸ್ವಸ್ಥ ನಾರಿ ಸಶಕ್ತ ಪರಿವಾರ’ದಿಂದ ಸದೃಢ ಭಾರತ ನಿರ್ಮಾಣ ಸಾಧ್ಯ: ಶಾಸಕ ಎಂ.ಆರ್. ಪಾಟೀಲ

Spread the love

ಕುಂದಗೋಳ:ಪ್ರತಿಯೊಬ್ಬ ನಾರಿಯು ಸದೃಢವಾಗಿದ್ದರೆ ಮತ್ತು ಆರೋಗ್ಯವಂತಳಾಗಿದ್ದರೆ ಮಾತ್ರ ಕುಟುಂಬದಲ್ಲಿ ಎಲ್ಲರೂ ಆರೋಗ್ಯವಾಗಿರುತ್ತಾರೆ. ಈ ಉದ್ದೇಶದಿಂದ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ‘ಸ್ವಸ್ಥ ನಾರಿ ಸಶಕ್ತ ಪರಿವಾರ’ ಅಭಿಯಾನವು ಸದೃಢ ಕುಟುಂಬಗಳ ಮೂಲಕ ಬಲಿಷ್ಠ ಭಾರತವನ್ನು ನಿರ್ಮಿಸುವ ಗುರಿ ಹೊಂದಿದೆ ಎಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಎಂ.ಆರ್. ಪಾಟೀಲ ಅವರು ಹೇಳಿದರು.

ಅವರು ಬುಧುವಾರದಂದು ಪಟ್ಟಣದ ಶಿವಾನಂದ ಮಠದ ಸಭಾಭವನದಲ್ಲಿ ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ, ಧಾರವಾಡದ ನೇತೃತ್ವದಲ್ಲಿ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ಸ್ವಚ್ಛತಾ ಹೀ ಸೇವಾ’, ‘ಪೋಷಣ್ ಅಭಿಯಾನ’, ‘ತಂಬಾಕು ಮುಕ್ತ ಯುವ ಅಭಿಯಾನ’, ‘ಏಕ ಭಾರತ-ಶ್ರೇಷ್ಠ ಭಾರತ’ ಮತ್ತು ‘ವಿಕಸಿತ ಭಾರತ-2047’ ಸೇರಿದಂತೆ ಹಲವು ಕೇಂದ್ರ ಯೋಜನೆಗಳ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜನರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಈ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಅವರು ಕರೆ ನೀಡಿದರು.

“ಇದು ದೇಶಾದ್ಯಂತ ಹಮ್ಮಿಕೊಂಡಿರುವ ಯೋಜನೆಯಾಗಿದೆ. ಪ್ರತಿಯೊಬ್ಬ ಮಹಿಳೆಯು ಕಾಲಕಾಲಕ್ಕೆ ಶಿಶು ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ತಮವಾದ ಪರಿವಾರವನ್ನು ನಿರ್ಮಿಸಬೇಕು. ಅವರ ಮಕ್ಕಳು ಉತ್ತಮವಾಗಿ ಬೆಳೆಯಬೇಕು ಎಂಬುದು ಸರ್ಕಾರದ ಆಶಯ,” ಎಂದರು. ಅಲ್ಲದೆ, ಮಕ್ಕಳು 18 ವರ್ಷ ತಲುಪಿದ ಮೇಲೆ ಶಾಲಾ ಕಾಲೇಜುಗಳಲ್ಲಿ ಅವರಿಗೆ ಅಗತ್ಯವಿರುವಂತಹ ವಸ್ತುಗಳನ್ನು ಸಹ ಕೇಂದ್ರ ಸರ್ಕಾರ ವಿತರಿಸುತ್ತಿದ್ದು, ಯುವ ಪೀಳಿಗೆ ಇದರ ಪ್ರಯೋಜನ ಪಡೆಯಬೇಕು ಎಂಬ ಹಿತದೃಷ್ಟಿಯಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವು ಯಶಸ್ವಿಯಾಗಿ ಎಲ್ಲರಿಗೂ ತಲುಪಿದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಉಮಾ ಬಳ್ಕೊಳ್ಳಿಯವರು ಮಾತನಾಡಿ, ಯೋಜನೆಯ ರೂಪುರೇಷೆಗಳು, ಅದರ ಜಾರಿಯ ಸ್ವರೂಪ ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಆದರ್ಶ ಕಲಾ ತಂಡ, ಸಂಕ್ಲೀಪೂರ ಇವರಿಂದ ಜಾನಪದಗಳ ಮೂಲಕ ಸಾಂಸ್ಕೃತಿಕ ಸ್ವಾಗತ ನಡೆಯಿತು.

ಕೇಂದ್ರ ಸಂವಹನ ಇಲಾಖೆ, ಧಾರವಾಡದ ಕಾರ್ಯಕ್ರಮ ಸಂಯೋಜಕ ಮುರಳೀಧರ ತುಕ್ಕಪ್ಪ ಕಾರಭಾರಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಂಕರ ತಮ್ಮಣ್ಣವರ ಮತ್ತು ಲೀಡ್ ಬ್ಯಾಂಕ್‌ನ ಆಪ್ತ ಸಮಾಲೋಚಕ ನಿಂಗಪ್ಪ ಎನ್. ಮಡಿವಾಳರ ಅವರು ಮಾಹಿತಿ ನೀಡಿದರು. ಸಹಾಯಕ ಪ್ರಾಧ್ಯಾಪಕ ಕೃಷ್ಣಪ್ಪ ಲಮಾಣಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ಪ ಪಂ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರ, ತಹಶೀಲ್ದಾರ ರಾಜು ಮಾವರಕರ, ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಂದ್ರ ಗೊಡ್ಡೆಮ್ಮಿ, ಬಿಇಒ ಮಹಾದೇವಿ ಮಾಡಲಗೇರಿ ಮತ್ತು ಪ ಪಂ ಮುಖ್ಯಾಧಿಕಾರಿ ಸಿ.ವಿ., ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಶ ಅಂಗಡಿ ಕುಲಕರ್ಣಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *