
ಧಾರವಾಡ: ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯದ ವಿವಿಧ ಮಾಧ್ಯಮ ಸಂಸ್ಥೆಗಳು ಈ ಕೆಳಕಂಡಂತೆ ದತ್ತಿನಿಧಿ ಪ್ರಶಸ್ತಿಗಳನ್ನು ಸ್ಥಾಪಿಸಿವೆ. ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆ ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ ಅಭಿಮಾನಿ ಪ್ರಶಸ್ತಿ, ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆ ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ ಮೈಸೂರು ದಿಗಂತ ಪ್ರಶಸ್ತಿ, ಬೆಂಗಳೂರಿನ ಅಭಿಮನ್ಯು ಪತ್ರಿಕೆ ಸಂಸ್ಥೆ ದಮನಿತ ಸಮುದಾಯಗಳ ಪರ ಧ್ವನಿಯಾದ ಅತ್ಯುತ್ತಮ ಲೇಖನ, ಅಂಕಣ, ಸಂಪಾದಕೀಯ ಹಾಗೂ ಪರಿಣಾಮಕಾರಿ ವರದಿಗೆ ಅಭಿಮನ್ಯು ಪ್ರಶಸ್ತಿ, ಹಾಗೂ ಬೆಂಗಳೂರಿನ ಪ್ರಜಾ ಸಂದೇಶ ಪತ್ರಿಕಾ ಸಂಸ್ಥೆ ಶೋಷಣೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಕ್ಕೆ ಪ್ರಜಾ ಸಂದೇಶ ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಿವೆ. ಈ ದತ್ತಿ ಪ್ರಶಸ್ತಿಗಳು ತಲಾ ₹10,000 ನಗದು ಬಹುಮಾನ ಒಳಗೊಂಡಿವೆ.
ಈ ಪ್ರಶಸ್ತಿಗಳಿಗೆ ಆಸಕ್ತ ಪತ್ರಕರ್ತರು 01-01-2025 ರಿಂದ 25-10-2025ರ ವರೆಗೆ ಪ್ರಕಟವಾಗಿರುವ ತಮ್ಮ ಒಂದು ಲೇಖನ ಅಥವಾ ವರದಿಯನ್ನು ಕಳುಹಿಸಬಹುದು. ಕನ್ನಡ ದೈನಿಕ, ಟಿವಿ ವಾಹಿನಿ ಅಥವಾ ವಾರಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ತಮ್ಮ ಹೆಸರಿನ (ಬೈಲೈನ್) ವರದಿ ಅಥವಾ ಲೇಖನಗಳನ್ನು ಮಾತ್ರ ಕಳುಹಿಸಬಹುದು. ಲೇಖನ ಅಥವಾ ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದರೆ, ಸಂಬಂಧಿತ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು.
ಲೇಖನ ಅಥವಾ ವರದಿಗಳ ಲಕೋಟೆಯಲ್ಲಿ ಯಾವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಿರುವುದು ಎಂಬುದನ್ನು ಸ್ಪಷ್ಟವಾಗಿ “ಅಭಿಮಾನಿ ಪ್ರಶಸ್ತಿ–2025”, “ಮೈಸೂರು ದಿಗಂತ ಪ್ರಶಸ್ತಿ–2025”, “ಅಭಿಮನ್ಯು ಪ್ರಶಸ್ತಿ–2025” ಅಥವಾ “ಪ್ರಜಾ ಸಂದೇಶ ದತ್ತಿ ಪ್ರಶಸ್ತಿ–2025” ಎಂದು ಉಲ್ಲೇಖಿಸಬೇಕು.
ಲೇಖನಗಳು 2025ರ ನವೆಂಬರ್ 12ರೊಳಗೆ ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಬೇಕು:
ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೆÇೀಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು–560001.
ಈ ಕುರಿತು ಪ್ರಕಟಣೆ ನೀಡಿರುವ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಅವರು, ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

