ಸಮೀಕ್ಷೆ ವೇಳೆ ಗಾಯಗೊಂಡ ಶಿಕ್ಷಕರಿಗೆ ಪರಿಹಾರ, ಸೌಲಭ್ಯಕ್ಕೆ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭರವಸೆ

Spread the love

ಧಾರವಾಡ:ಜಿಲ್ಲೆಯಲ್ಲಿ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಪಘಾತ, ಅನಾರೋಗ್ಯಕ್ಕೆ ಒಳಗಾದ ಸಮೀಕ್ಷೆದಾರ ಶಿಕ್ಷಕರಿಗೆ ಸರ್ಕಾರದಿಂದ ನಿಯಮಾನುಸಾರ ಸೂಕ್ತ ಪರಿಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ನೀಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿ, ಅಗತ್ಯ ಕ್ರಮ ಕೈಗೊಳ್ಳುವದಾಗಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಭರವಸೆ ನೀಡಿದರು.

ಅವರು ಸೋಮವಾರದಂದು (ಅ. 27) ಬೆಳಿಗ್ಗೆ ಜಿಲ್ಲಾ ಪಂಚಾಯತ್ ಆವರಣದಲ್ಲಿ, ಸಮೀಕ್ಷೆ ಸಮಯದಲ್ಲಿ ಆಕಸ್ಮಿಕವಾಗಿ ಅಪಘಾತವಾಗಿ ವಿಶ್ರಾಂತಿಯಲ್ಲಿರುವ ಶಿಕ್ಷಕಿಯರೊಂದಿಗೆ ಆಗಮಿಸಿದ್ದ ಕುಂದಗೋಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳ ಮನವಿ ಸ್ವೀಕರಿಸಿ ಮಾತನಾಡಿದರು.

ಸಮೀಕ್ಷೆ ಸಮಯದಲ್ಲಿ ಗಣತಿದಾರರು ವಿವಿಧ ರೀತಿಯ ಅಡಚಣೆಗಳ ಹೊರತಾಗಿಯೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸರ್ಕಾರದಿಂದ ಗೌರವಧನ ಸೇರಿದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಅನಾರೋಗ್ಯ ಪೀಡಿತರಾಗಿರುವ ಶಿಕ್ಷಕರ ವಿಶ್ರಾಂತಿಗೆ ರಜೆ ಹಾಗೂ ವೈದ್ಯಕೀಯ ವೆಚ್ಚದ ಮಂಜೂರಾತಿ ಬಗ್ಗೆ ನಿಯಮಾವಳಿ ಪ್ರಕಾರ ಕ್ರಮವಹಿಸಲು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗುವುದು. ‘ತಮ್ಮೊಂದಿಗೆ ನಾವಿದ್ದೇವೆ’ ಎಂದು ಸಚಿವರು ನೈತಿಕ ಧೈರ್ಯ ತುಂಬಿದರು.

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರು ಸೇರಿದಂತೆ ಎಲ್ಲ ಇಲಾಖೆಗಳ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಬೇಡಿಕೆ ಮತ್ತು ಮನವಿಗಳಿಗೆ ನಾವು ಸ್ಪಂದಿಸುತ್ತೇವೆ, ಅದರಂತೆ ಈ ಸಮಸ್ಯೆಗೂ ಪರಿಹಾರ ನೀಡುತ್ತೇವೆ. ಈ ಕುರಿತು ಶಿಕ್ಷಕರ ಮನವಿಗಳೊಂದಿಗೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿಗಳು ಹಾಗೂ ರಾಜ್ಯ ಹಂತದ ಅಧಿಕಾರಿಗಳ ಗಮನಕ್ಕೆ ತಂದು ಅನುಕೂಲ ಕಲ್ಪಿಸುವ ಸ್ಪಷ್ಟ ಭರವಸೆಯನ್ನು ನೀಡಿದರು. ಅಲ್ಲದೆ, ಗಾಯಗೊಂಡಿದ್ದ ಉಭಯ ಶಿಕ್ಷಕಿಯರ ಕುಶಲೋಪರಿಯನ್ನು ವಿಚಾರಿಸಿ, “ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರಿ” ಎಂದು ಆತ್ಮವಿಶ್ವಾಸ ತುಂಬಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಜಿಲ್ಲೆಯಲ್ಲಿ ಸಮೀಕ್ಷಾ ಸಮಯದಲ್ಲಿ ಇಬ್ಬರು ಶಿಕ್ಷಕಿಯರು ಮತ್ತು ಓರ್ವ ಶಿಕ್ಷಕರು ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಮೂಳೆಮುರಿತ ಮತ್ತು ಗಾಯಗಳಾಗಿದ್ದು, ಅವರಿಗೆ ವೈದ್ಯರ ಸೂಚನೆಯಂತೆ ವಿಶ್ರಾಂತಿಗಾಗಿ ವಿಶೇಷ ರಜೆ ಮತ್ತು ವೈದ್ಯಕೀಯ ವೆಚ್ಚವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಶಿಕ್ಷಕರ ಸಮಸ್ಯೆಯನ್ನು ತಾವೂ ಸಹ ಖುದ್ದಾಗಿ ಪರಿಶೀಲಿಸಿದ್ದು, ಅವರ ಬೇಡಿಕೆಗೆ ಅನುಗುಣವಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಸರ್ಕಾರಕ್ಕೆ ಈ ಕುರಿತು ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು. ಸೂಕ್ತ ನಿರ್ಧಾರ ತೆಗೆದುಕೊಂಡು ಸಮೀಕ್ಷೆದಾರರಿಗೆ, ಶಿಕ್ಷಕರಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಚಿವರಿಗೆ ವಿನಂತಿಸಿದರು.

ಇದೇ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭುವನೇಶ ಪಾಟೀಲ ಅವರಿಗೆ ಅಪಘಾತಕ್ಕೊಳಗಾದ ಶಿಕ್ಷಕಿಯರ ಸಮ್ಮುಖದಲ್ಲಿ ಏಕಕಾಲಕ್ಕೆ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ಅಪಘಾತಕ್ಕೊಳಗಾದ ಕಮಡೊಳ್ಳಿ ಸರಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯಗುರುಗಳಾದ ಸುಶೀಲಾ ಪಾಟೀಲ್ ಮತ್ತು ಹಿರೇಹರಕುಣಿ ಶಾಲೆಯ ಶಿಕ್ಷಕಿ ವೀಣಾ ಚೆನ್ನಿ, ಕರ್ನಾಟಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಗೋಳ ತಾಲೂಕು ಅಧ್ಯಕ್ಷ ಎಂ.ಎಂ. ಘೋಡಕೆ, ಜಿಲ್ಲಾ ಸಂಘದ ಎಚ್.ಪಿ. ನದಾಫ್, ಪ್ರಧಾನ ಕಾರ್ಯದರ್ಶಿ ಎಸ್.ಡಿ. ಕೋರಿ, ಧಾರವಾಡ ಶಹರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಆರ್. ಕಬ್ಬೇರ, ಎನ್‌ಜಿಒ ಜಿಲ್ಲಾ ಪದಾಧಿಕಾರಿಗಳಾದ ಫಿರೋಜ್ ಗುಡೇನಕಟ್ಟಿ, ಧಾರವಾಡ ಶಹರ ಶಿಕ್ಷಕರಾದ ಎಸ್.ಪಿ. ಹಿರೇಮಠ, ಆರ್.ಬಿ. ಮರಿಗೌಡ್ರ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *