
ಧಾರವಾಡ: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು ಸರ್ಕಾರ ಅವಕಾಶ ನೀಡಿದ್ದು, ಈ ಅಭಿವೃದ್ಧಿ ಯೋಜನಾ ವರದಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿ ಆಗಿರಬೇಕು ಎಂದು ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಅಭಿಪ್ರಾಯಪಟ್ಟರು.
ಅವರು ಸೋಮವಾರದಂದು (ಅ. 27) ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯನ್ನು ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧಾರವಾಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ರಾಜ್ಯದಲ್ಲಿಯೇ ಮೊದಲನೇಯದಾಗಿ ಅಭಿವೃದ್ಧಿ ಯೋಜನಾ ವರದಿ ಕುರಿತ ಸಭೆಯನ್ನು ಆಯೋಜಿಸಿರುವುದು ಗಮನಾರ್ಹ ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವಕಾಶವಾಗುವಂತೆ ಅಗತ್ಯ ಅನುದಾನ ನೀಡಲು ಸರ್ಕಾರ ಕ್ರಮವಹಿಸಲಿದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಗತ್ಯ ಕಾಮಗಾರಿ ಮತ್ತು ಕಾರ್ಯಕ್ರಮಗಳನ್ನು ಯೋಜನಾ ವರದಿಯಲ್ಲಿ ಸೇರಿಸಬೇಕು. ಯೋಜನಾ ವರದಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಮುನ್ನೋಟವಾಗಬೇಕು ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.
ಗ್ರಾಮೀಣ ಮತ್ತು ನಗರ ಅಭಿವೃದ್ಧಿಗೆ ವಿಸ್ತೃತ ವರದಿ ರೂಪಿಸಬೇಕು ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಿಯಮಾನುಸಾರ ಬೇಡಿಕೆ ಪಡೆದುಕೊಳ್ಳಬೇಕು. ಮೂಲಭೂತ ಸೌಕರ್ಯಗಳ ಹೆಚ್ಚಳದ ಜೊತೆಗೆ ಜನರ ಕಲ್ಯಾಣ ಕಾರ್ಯಕ್ರಮಗಳ ಸೇರ್ಪಡೆ ಮಾಡಿ ಉತ್ತಮ ಯೋಜನೆ ರೂಪಿಸಬೇಕು. ಜನರ ಜೀವನಮಟ್ಟ ಸುಧಾರಣೆ ಮತ್ತು ಆರ್ಥಿಕ ಚಟುವಟಿಕೆಗಳ ಹೆಚ್ಚಳಕ್ಕೆ ಅಗತ್ಯ ಕಾರ್ಯಕ್ರಮಗಳನ್ನು ಅಭಿವೃದ್ಧಿ ಯೋಜನಾ ವರದಿಯಲ್ಲಿ ಸೇರಿಸಬೇಕು ಎಂದು ಅವರು ನಿರ್ದೇಶಿಸಿದರು.
ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಅವರು, ಜಿಲ್ಲೆಯ ಸಮಗ್ರ ವರದಿಗೆ ಅಧಿಕಾರಿಗಳು ಅಗತ್ಯ ಯೋಜನಾ ವರದಿ ರೂಪಿಸಬೇಕು ಮತ್ತು ಅದು ಎಲ್ಲ ಸಮುದಾಯಗಳ ಪ್ರಗತಿಗೆ ಪೂರಕವಾಗಿರಬೇಕು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಅವರು ಎಸ್.ಸಿ., ಎಸ್.ಟಿ. ಗ್ರಾಮಸಭೆ ಆಗಬೇಕು ಮತ್ತು ಜಿಲ್ಲೆಯ ಎಲ್ಲ ಎಸ್.ಸಿ., ಎಸ್.ಟಿ. ಸಮುದಾಯ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ, ನಮ್ಮ ಜಿಲ್ಲೆಯಲ್ಲಿ ಜಿಲ್ಲಾ ಯೋಜನಾ ಅಭಿವೃದ್ಧಿ ಸಮಿತಿ ಜರುಗುತ್ತಿದೆ. ಇಂದಿನ ಸಭೆ ಪೂರ್ವಭಾವಿ ಸಭೆ ಆಗಿದ್ದು, ಎಲ್ಲ ಸಮುದಾಯ, ಗ್ರಾಮ ಮತ್ತು ನಗರ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಯನ್ನು ರೂಪಿಸಲಾಗುತ್ತದೆ. ಮುಂದಿನ ವಾರ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಯೋಜನಾ ವರದಿ ತಯಾರಿಸುವ ಕುರಿತು ಕಾರ್ಯಾಗಾರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಸಿಇಓ ಭುವನೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ವೇದಿಕೆಯಲ್ಲಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಮಾರುತಿ ತಳವಾರ ಅವರು ಜಿಲ್ಲಾ ಯೋಜನೆ ತಯಾರಿಕೆ ಕುರಿತು ಸಭೆಯಲ್ಲಿ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

