ರಾಣಿ ಚೆನ್ನಮ್ಮ ವಿಜಯ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಸ್ಫೂರ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Spread the love

ಬೆಳಗಾವಿ: 1857 ರ ಸಿಪಾಯಿ ದಂಗೆಗೂ ಬರೋಬ್ಬರಿ 33 ವರ್ಷಗಳ ಮೊದಲೇ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರನ್ನು ಸೋಲಿಸಿದ್ದರು. ಬ್ರಿಟೀಷರನ್ನು ಹಿಮ್ಮೆಟ್ಟಿಸಿ ಕಿತ್ತೂರಿನ ಸ್ವಾಭಿಮಾನವನ್ನು ಗೆಲ್ಲಿಸಿದ ದಿನವೇ ಕಿತ್ತೂರು ಉತ್ಸವದ ದಿನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು. 2017 ರಲ್ಲಿ ಕಿತ್ತೂರು ಉತ್ಸವವನ್ನು ಮೊದಲ ಬಾರಿಗೆ ಆರಂಭಿಸಿದ್ದು ನಮ್ಮ ಸರ್ಕಾರವೇ ಎಂದು ಅವರು ಹೇಳಿದರು.

​ಬೆಳಗಾವಿ ಜಿಲ್ಲಾಡಳಿತ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ 201ನೇ ವರ್ಷದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತೀಯರನ್ನು ಪರಸ್ಪರ ಎತ್ತಿಕಟ್ಟುವ ಬಗ್ಗೆ ಎಚ್ಚರಿಕೆ:

ವ್ಯಾಪಾರ ಮಾಡಲು ಬಂದ ಬ್ರಿಟೀಷರು ಭಾರತೀಯರನ್ನು ಪರಸ್ಪರ ಎತ್ತಿಕಟ್ಟಿ ಇಡೀ ದೇಶವನ್ನು ವಶಕ್ಕೆ ಪಡೆದುಕೊಂಡರು. ಬ್ರಿಟೀಷರಿಗೆ ನಮ್ಮವರೇ ಬೆಂಬಲ ಕೊಡುತ್ತಿದ್ದರು. ಚೆನ್ನಮ್ಮ ಮತ್ತು ರಾಯಣ್ಣನವರ ವಿರುದ್ಧ ಪಿತೂರಿ ಮಾಡಿದ್ದರು. ಈಗಲೂ ಭಾರತೀಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಎತ್ತಿಕಟ್ಟಿ ಕಚ್ಚಾಡಿಸುವವರು ನಮ್ಮ ನಡುವೆಯೇ ಇದ್ದಾರೆ. ಇವರ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು. ಸ್ವಾಭಿಮಾನಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಬಾಳಪ್ಪ ಅವರು ಒಟ್ಟಾಗಿ ಶೌರ್ಯದಿಂದ ಬ್ರಿಟೀಷರನ್ನು ಹಿಮ್ಮೆಟ್ಟಿಸಿದ್ದರು ಎಂದು ಅವರು ಸ್ಮರಿಸಿದರು. ಶಾಸಕರಾದ ಬಾಬಾ ಸಾಹೇಬ್ ಪಾಟೀಲರು ಕಿತ್ತೂರು ಉತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಅರ್ಥಪೂರ್ಣವಾಗಿ ನಡೆಸುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ಟಿಪ್ಪು-ಹೈದರಾಲಿ ಅಪ್ಪಟ ದೇಶಪ್ರೇಮಿಗಳು:

ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಇಬ್ಬರೂ ಬ್ರಿಟೀಷರ ನಿದ್ದೆಗೆಡಿಸಿದ್ದರು. ನಾಲ್ಕು ಮೈಸೂರು ಯುದ್ಧಗಳನ್ನು ನಡೆಸಿದ್ದರು. ಟಿಪ್ಪು ಮತ್ತು ಹೈದರಾಲಿ ಇಬ್ಬರೂ ಬ್ರಿಟೀಷರ ವಿರುದ್ಧ ವಿರೋಚಿತವಾಗಿ ಹೋರಾಡಿದ ಅಪ್ಪಟ ವೀರರು, ದೇಶಪ್ರೇಮಿಗಳು. ಈ ಇತಿಹಾಸವನ್ನು ಹೇಳಿದ ಕೂಡಲೇ, ನಾನು ಓಲೈಕೆ ರಾಜಕಾರಣ ಮಾಡುತ್ತೇನೆ ಎಂದು ಅಪಪ್ರಚಾರ ಮಾಡುತ್ತಾರೆ ಎಂದು ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸಿದರು. “ಇತಿಹಾಸ ಅರಿಯದವರು ಭವಿಷ್ಯ ರೂಪಿಸಲಾರರು” ಎನ್ನುವ ಅಂಬೇಡ್ಕರ್ ಅವರ ಮಾತು ಮರೆಯಬಾರದು ಎಂದು ಪ್ರತಿಪಾದಿಸಿದರು.

ಕೇಂದ್ರಕ್ಕೆ ಹಲವು ಪ್ರಸ್ತಾವನೆ:

ರಾಣಿ ಚೆನ್ನಮ್ಮನವರ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಕೂಡ ನಮ್ಮ ಸರ್ಕಾರವೇ. ಹಲವು ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಣೆಗೆ ತಂದಿದ್ದು ಕೂಡ ನಾವೆ. ಇದು ನಮ್ಮ‌ ಸಂಸ್ಕೃತಿ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಚೆನ್ನಮ್ಮ ಅವರ ಹೆಸರಿಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆದರೆ, ಕೇಂದ್ರ ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು

Leave a Reply

Your email address will not be published. Required fields are marked *