ಬೆಳಗಾವಿ: ಖ್ಯಾತ ವಕೀಲೆ ಪೂಜಾ ಕಾಕತಕರ್ ನಿವಾಸದ ಮೇಲೆ ಗುಂಡಿನ ದಾಳಿ; ಪುತ್ರಿ ಪ್ರಾಣಾಪಾಯದಿಂದ ಪಾರು

Spread the love

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಗರದ ಮಂಡೋಳಿ ರಸ್ತೆಯಲ್ಲಿರುವ ಖ್ಯಾತ ವಕೀಲೆ ಪೂಜಾ ಕಾಕತಕರ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಶನಿವಾರ ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯ ಅವಧಿಯಲ್ಲಿ ಈ ಕೃತ್ಯ ನಡೆದಿದ್ದು, ಇಡೀ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

​ದುಷ್ಕರ್ಮಿಗಳು ಪೂಜಾ ಅವರ ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ನಡೆಸಿದ್ದಾರೆ. ಆ ಸಮಯದಲ್ಲಿ ಮೊದಲ ಮಹಡಿಯ ಕೊಠಡಿಯಲ್ಲಿ ಪೂಜಾ ಅವರ ಪುತ್ರಿ ಸಂಸ್ಕೃತಿ ಅವರು ಪರೀಕ್ಷೆಯ ಸಿದ್ಧತೆಗಾಗಿ ಓದುತ್ತಿದ್ದರು. ಕಿಟಕಿಯ ಗಾಜಿಗೆ ಗುಂಡು ಬಡಿದ ಪರಿಣಾಮ ಸಂಸ್ಕೃತಿ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಗ್ರಾಮೀಣ ಪೊಲೀಸರು ಹಾಗೂ ಸುಕೋ (SUCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ತನಿಖೆ ಕೈಗೊಂಡಿದೆ.

​ಸ್ಥಳದಲ್ಲಿ ಪತ್ತೆಯಾದ ಗುಂಡಿನ ಅಂಶಗಳನ್ನು ಹಾಗೂ ಕಿಟಕಿಯ ಗಾಜಿನ ಚೂರುಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ. ಕಳೆದ 18 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿರುವ ಪೂಜಾ ಅವರ ಮೇಲೆ ವೃತ್ತಿ ವೈಷಮ್ಯದ ಹಿನ್ನೆಲೆಯಲ್ಲಿ ದಾಳಿ ನಡೆದಿದೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವ ಭರವಸೆಯನ್ನು ಇಲಾಖೆ ನೀಡಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ದಾಳಿಗೆ ಬಳಸಲಾದ ಶಸ್ತ್ರಾಸ್ತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

Leave a Reply

Your email address will not be published. Required fields are marked *