
ಕುಂದಗೋಳ: ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಮಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರಂತಹ ಮಹನೀಯರ ನೆನಪನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವು ನಿರಂತರವಾಗಿ ನಡೆಯಬೇಕು. ಅಂದಾಗ ಮಾತ್ರ ಇಂತಹ ಜಯಂತ್ಯೋತ್ಸವಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಶಾಸಕ ಎಂ.ಆರ್. ಪಾಟೀಲ್ ಹೇಳಿದರು.
ಇಲ್ಲಿನ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ 248ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚೆನ್ನಮ್ಮಳ ಬದುಕು ಇತಿಹಾಸದ ಕಿಚ್ಚು
ಚೆನ್ನಮ್ಮಳ ಬದುಕು ಅಜರಾಮರವಾಗಬೇಕಿದೆ ಎಂದು ಶ್ಲಾಘಿಸಿದ ಶಾಸಕರು, ಇತಿಹಾಸದ ಚರಿತ್ರೆ ಎಂದಿಗೂ ಮಾಸಬಾರದು. ಅದನ್ನು ನೆನಪಿಸುವ ಕಾರ್ಯವು ಒಂದೇ ದಿನಕ್ಕೆ ಮೀಸಲಾಗಬಾರದು. ಕಿತ್ತೂರು ರಾಣಿ ಚೆನ್ನಮ್ಮಳ ಸ್ವಾಭಿಮಾನ, ಆಕೆಯ ಹೋರಾಟದ ಕಿಚ್ಚು ಬಹಳಷ್ಟು ಅಗಾಧವಾದುದು. ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರವೂ ಬಹು ಮುಖ್ಯವಾಗಿದೆ ಎಂಬುದನ್ನು ಅವರು ಸಾರಿದರು.
“ಸಂಸ್ಕೃತಿ, ಕರ್ತವ್ಯ ಮತ್ತು ದೇಶಾಭಿಮಾನವನ್ನು ಪ್ರಚುರಪಡಿಸಬೇಕು. ಚೆನ್ನಮ್ಮ ಅವರು ಯಾವುದೇ ಧರ್ಮ ಅಥವಾ ಜಾತಿಗಾಗಿ ಹೋರಾಡಿದವರಲ್ಲ ಎಂಬುದನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಜಯಂತಿಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ನೆನಪಿಸುವ ಕಾರ್ಯ ಮಾಡುತ್ತಿದೆ,” ಎಂದು ಪಾಟೀಲ್ ಹೇಳಿದರು.
ಜಾತಿ ವ್ಯವಸ್ಥೆಯಿಂದ ದೇಶ ಹಾಳು: ವಿಷಾದ
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರೊ. ಎಫ್.ಬಿ. ಸೊರಟೂರ ಅವರು ಮಹಾತ್ಮರು ನಡೆದು ಬಂದ ಹಾದಿಯು ನಮ್ಮ ಬದುಕಿಗೆ ಬೆಳಕು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ನಾಡು, ನುಡಿ, ಸ್ವತಂತ್ರದ ಹಕ್ಕಿಗಾಗಿ ಹೋರಾಡಿದ ರಾಣಿ ಚೆನ್ನಮ್ಮ ಅವರ ಹೆಸರೂ ಅಗ್ರಗಣ್ಯ ಸ್ಥಾನ ಪಡೆದಿದೆ. ಈ ತಾಯಿಯೊಂದಿಗೆ ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ ಸಹಿತ ಹಲವರು ಹೋರಾಡಿದ್ದಾರೆ ಎಂಬುದನ್ನು ಮರೆಯಲಾಗದು ಎಂದರು.
“ನಮ್ಮ ದೇಶವು ಭರತಖಂಡ ಎಂದು ಹೆಮ್ಮೆಯಿಂದ ಕರೆಸಿಕೊಂಡಿದ್ದರೂ, ದುರಾದೃಷ್ಟವಶಾತ್ ಈ ಬಂಗಾರದ ಕೂಟವಾದ ದೇಶವು ಜಾತಿ ವ್ಯವಸ್ಥೆಯಿಂದ ಹಾಳಾಗುತ್ತಿದೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಅವರು ಮುಂದುವರೆದು, “ಚೆನ್ನಮ್ಮಳನ್ನು ಒಂದೇ ಧರ್ಮ, ಜಾತಿಗೆ ಹೋಲಿಸಿಕೊಳ್ಳುವುದು ಸರಿಯಲ್ಲ. ಕಿತ್ತೂರು ರಾಣಿ ಯಾರೊಬ್ಬರಿಗೆ ಸೀಮಿತಗೊಂಡಿಲ್ಲ. ಕೇವಲ 51 ವರ್ಷ ಬಾಳಿದ ಚೆನ್ನಮ್ಮಳ ಹೆಸರು ಸೂರ್ಯ, ಚಂದ್ರ ಇರುವವರೆಗೂ ಅಜರಾಮರ. ದುರ್ದೈವಕರ ಸಂಗತಿ ಎಂದರೆ ಕೆಲವರು ಆಕೆಯನ್ನು ಜಾತಿಗೆ ಸೀಮಿತಗೊಳಿಸಿ ಬೇಲಿ ಹೆಣೆದಿದ್ದಾರೆ. ಶಾಲೆ ಕಲಿಯದ ಸಂಗೊಳ್ಳಿ ರಾಯಣ್ಣ ಮತ್ತು ಚೆನ್ನಮ್ಮಳ ಎರಡನೇ ದತ್ತಕಪುತ್ರ ಎನಿಸಿಕೊಂಡ ಇತಿಹಾಸ ಮರೆತುಹೋಗಿದೆ,” ಎಂದು ನೋವು ವ್ಯಕ್ತಪಡಿಸಿದರು.
ವೀರಶೈವ ಮಹಾಸಭೆ ಉಲ್ಲೇಖಕ್ಕೆ ಆಗ್ರಹ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವರು ಜಯಂತಿ ಕಾರ್ಯಕ್ರಮದ ವರದಿಯಲ್ಲಿ ವೀರಶೈವ ಮಹಾಸಭೆಯ ಹೆಸರನ್ನು ಉಲ್ಲೇಖಿಸಬೇಕು ಎಂದು ಶಾಸಕರಲ್ಲಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಂ.ಆರ್. ಪಾಟೀಲ್ ಅವರು, ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ ರಾಜು ಮಾವರಕರ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿಪಿಐ ಶಿವಾನಂದ ಅಂಬಿಗೇರ, ಜಗದೀಶ್ ಕಮ್ಮಾರ, ಸುಧಾಕರ ಬಾಗೇವಾಡಿ, ಸಿ.ವಿ. ಕುಲಕರ್ಣಿ, ಡಾ. ಹನಮಂತಗೌಡ ಪಾಟೀಲ, ತಾ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ನಾಗರಾಜ ದೇಶಪಾಂಡೆ. ಹಿರಿಯ ಮುಖಂಡರಾದ ಅರವಿಂದಪ್ಪ ಕಟಗಿ, ಸೋಮರಾವ ದೇಶಪಾಂಡೆ,ಉಮೇಶ ಹೆಬಸೂರ, ನಾಗನಗೌಡ ಸಾತ್ಮಾರ, ಬಸಣ್ಣ ನಾವಳ್ಳಿ, ಶೇಖಣ್ಣ ಬಾಳಿಕಾಯಿ, ಬಸವರಾಜ ಶಿರಸಂಗಿ, ಯಲ್ಲಪ್ಪ ಶಿಗ್ಗಾಂವಿ, ಹೇಮನಗೌಡ ಬಸನಗೌಡ್ರ, ಮಾಣಿಕ್ಯ ಚಿಲ್ಲೂರ, ಸಿದ್ದಣ್ಣ, ಶಿವಾನಂದ ನವಲಗುಂದ ಮುತ್ತಣ್ಣ ಅಣ್ಣಿಗೇರಿ ಸಹಿತ ಹಲವರು ಹಾಜರಿದ್ದರು. ಶಿಕ್ಷಕ ಎಸ್.ಸಿ. ಶಾನವಾಡ ಕಾರ್ಯಕ್ರಮ ನಿರೂಪಿಸಿದರು

