
ಬೆಂಗಳೂರು: ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿರುವುದು ಉತ್ತಮ ಕೆಲಸವಾಗಿದ್ದು, ಇದರ ಸಂಪೂರ್ಣ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.
ಬೆಂಗಳೂರಿನ ಪೊಲೀಸ್ ಹುತಾತ್ಮರ ಉದ್ಯಾನವನದಲ್ಲಿ ಮಂಗಳವಾರ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಸಾಧನೆಗೆ ಮೆಚ್ಚುಗೆ:
ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಅನೈತಿಕ ಪೊಲೀಸ್ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ ಕೆಲಸವಾಗಿದೆ. ಹಾಗೆಯೇ, ಮಾದಕ ವಸ್ತುಗಳ ಹಾವಳಿಗೂ ಬ್ರೇಕ್ ಬಿದ್ದಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ. ಈ ಎಲ್ಲಾ ಸಾಧನೆಗಳ ಶ್ರೇಯ ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದು ಸಿಎಂ ಹೇಳಿದರು.
ಡಿಸಿಆರ್ಇ ಠಾಣೆಗಳ ಪರಿಣಾಮಕಾರಿ ನಿರ್ವಹಣೆ ಅಗತ್ಯ:
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್ಇ (DCRE – Directorate of Civil Rights Enforcement) ಪೊಲೀಸ್ ಠಾಣೆಗಳನ್ನು ಕಾರ್ಯೋನ್ಮುಖಗೊಳಿಸಲಾಗಿದೆ. ಈ ಠಾಣೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಬೇಕು. ಸಂವಿಧಾನದಲ್ಲಿ ಜನರಿಗೆ ಕೊಟ್ಟಿರುವ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿಗಳು ನುಡಿದರು.
ಹುತಾತ್ಮರಿಗೆ ಗೌರವ ಮತ್ತು ಸೌಲಭ್ಯ ಹೆಚ್ಚಳ:
ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡುವ ಮೂಲಕ ಹುತಾತ್ಮರಾಗಿದ್ದಾರೆ. ಇವರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಇವರನ್ನು ಸ್ಮರಿಸಿ, ನಮಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಅಲ್ಲದೆ, ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯ ವೈದ್ಯಕೀಯ ಮರುಪಾವತಿ ವೆಚ್ಚವನ್ನು ವಾರ್ಷಿಕ ₹1 ಲಕ್ಷದಿಂದ ₹1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು ₹1,000 ದಿಂದ ₹1,500ಕ್ಕೆ ಹೆಚ್ಚಿಸಿರುವುದಾಗಿ ಅವರು ತಿಳಿಸಿದರು.
ಬೆಂಗಳೂರು ರಸ್ತೆ ಅಭಿವೃದ್ಧಿಗೆ ₹1.20 ಲಕ್ಷ ಕೋಟಿ: ದಿನೇಶ್ ಗುಂಡೂರಾವ್ ರಸ್ತೆ ಅಗಲೀಕರಣಕ್ಕೆ ವಿರೋಧ ಶ್ಲಾಘಿಸಿದ ಸಿಎಂ
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣ ಮತ್ತು ಕ್ಷೇತ್ರದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ₹1,20,000 ಕೋಟಿ ನೀಡಲಾಗುತ್ತಿದೆ ಎಂದು ಘೋಷಿಸಿದರು.
ರಸ್ತೆ ಅಗಲೀಕರಣಕ್ಕೆ ಗುಂಡೂರಾವ್ ವಿರೋಧ ಶ್ಲಾಘನೀಯ:
ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು ಎಂದು ಸಿಎಂ ಶ್ಲಾಘಿಸಿದರು. ಕೆಂಪೇಗೌಡರ ಕಾಲದಲ್ಲಿ ಪೇಟೆ ಬೀದಿಯಾಗಿದ್ದ ಈ ಪ್ರದೇಶದ ರಸ್ತೆಗಳ ಅಗಲೀಕರಣದ ಬಗ್ಗೆ ನಾವು ಚಿಂತಿಸಿದ್ದೆವು. ಆದರೆ, “ನಮ್ಮ ಜನಗಳಿಗೆ ಸಮಸ್ಯೆ ಆಗುತ್ತದೆ ಸರ್” ಎಂದು ದಿನೇಶ್ ಗುಂಡೂರಾವ್ ಅವರು ಸ್ಪಷ್ಟವಾಗಿ ನಿರಾಕರಿಸಿದರು. ಜನರ ಹಿತಕ್ಕಾಗಿ ರಸ್ತೆ ಅಗಲೀಕರಣ ಮಾಡದೆ, ರಸ್ತೆಗಳ ಆಧುನೀಕರಣ ಮತ್ತು ಚಿಕ್ಕಪೇಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡಿದ್ದಾರೆ ಎಂದು ಸಿಎಂ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಮತ್ತು ಮೆಟ್ರೋ ಅನುದಾನ:
ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಜನಸಂಖ್ಯೆ ಹೆಚ್ಚುತ್ತಿರುವ ಈ ಸವಾಲನ್ನು ಎದುರಿಸಲು ರಸ್ತೆಗಳ ಆಧುನೀಕರಣ ಮತ್ತು ಅಭಿವೃದ್ಧಿಗೆ ಹೇರಳವಾದ ಹಣ ಒದಗಿಸಲಾಗುತ್ತಿದೆ. ಬೆಂಗಳೂರಿನ ಮೆಟ್ರೋ ಯೋಜನೆಗೆ ಶೇ.87ರಷ್ಟು ಹಣ ಕೊಡುವುದು ರಾಜ್ಯ ಸರ್ಕಾರ. ಅಂದರೆ ರಾಜ್ಯದ ಜನತೆಯ ಶೇ.87ರಷ್ಟು ಹಣದಲ್ಲಿ ಮೆಟ್ರೋ ಆಗಿದೆ. ಆದರೆ, ಬಿಜೆಪಿಯವರು ಮೆಟ್ರೋ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳುತ್ತಾರೆ ಎಂದು ಸಿಎಂ ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರದ ವಿರುದ್ಧ ವಾಗ್ದಾಳಿ:
ಜಿಎಸ್ಟಿ ಜಾರಿ ಮಾಡಿ 8 ವರ್ಷ ಇಡೀ ಭಾರತೀಯರ ಹಣ ಸುಲಿದಿದ್ದು ಇದೇ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ಫೋಟೋ ಹಾಕಿ “ದೀಪಾವಳಿ ಗಿಫ್ಟ್” ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. “ದೀಪಾವಳಿ ಗಿಫ್ಟ್” ಎಂದು ಜಾಹಿರಾತು ನೀಡಿರುವ ಮೋದಿ ಸರ್ಕಾರದ ಜಿಎಸ್ಟಿ ಬದಲಾವಣೆಯಿಂದ ರಾಜ್ಯಕ್ಕೆ ₹15 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ:
ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಹೊಸ ರಸ್ತೆ ನಿರ್ಮಿಸಲಿಲ್ಲ. ಈಗ ಇರುವ ರಸ್ತೆಗಳೆಲ್ಲಾ ನಮ್ಮ ಸರ್ಕಾರದ ಕಾಲದಲ್ಲೇ ಆಗಿರುವಂಥವು. ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಿ ಒಂದು ಲೇಯರ್ ಟಾರ್ ಹಾಕಬೇಕು ಎಂದು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಹೊಸ ಔಟರ್ ರಿಂಗ್ ರಸ್ತೆ, ಸುರಂಗ ಮಾರ್ಗ, ಫ್ಲೈ ಓವರ್, ಡಬಲ್ ಡೆಕ್ಕರ್ ರಸ್ತೆಗಳು ಸೇರಿ ಬೆಂಗಳೂರಿನ ಅಭಿವೃದ್ಧಿಗೆ ನೀಡುತ್ತಿರುವ ಈ ಹಣದ ಸದ್ಬಳಕೆಯಾಗಬೇಕು ಎಂದು ಅವರು ಹೇಳಿದರು.

