
ಕುಂದಗೋಳ ತಾಲ್ಲೂಕಿನಲ್ಲಿ ಬೆಳೆ ವಿಮೆ ತಾರತಮ್ಯ: ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ
ಧಾರವಾಡ: ಅತೀವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡಿರುವ ಕುಂದಗೋಳ ತಾಲ್ಲೂಕಿನ ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಬುದುವಾರದಂದು ಮನವಿ ಸಲ್ಲಿಸಿದರು.
ಕುಂದಗೋಳ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದ ಹೆಸರು, ಶೇಂಗಾ, ಹತ್ತಿ, ಉದ್ದು, ಸೋಯಾಬೀನ್, ಮತ್ತು ಗೋವಿನಜೋಳ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಒಂದು ಹೋಬಳಿಗೆ ಬೆಳೆ ವಿಮೆ, ಇನ್ನೊಂದಕ್ಕೆ ಇಲ್ಲ
ಕಳೆದ ವರ್ಷದ ಅತೀವೃಷ್ಟಿ ಪರಿಹಾರವಾಗಿ ಕುಂದಗೋಳ ಹೋಬಳಿಗೆ ಒಳಪಟ್ಟ ರೈತರಿಗೆ ಬೆಳೆ ವಿಮೆ ಸಂದಾಯವಾಗಿದೆ. ಆದರೆ, ಇದೇ ತಾಲ್ಲೂಕಿನ ಸಂಶಿ ಹೋಬಳಿಯ ರೈತರಿಗೆ ಯಾವುದೇ ಬೆಳೆ ವಿಮೆ ಪರಿಹಾರ ಬಂದಿಲ್ಲ. ಸರ್ಕಾರವು ಒಂದೇ ತಾಲ್ಲೂಕಿನಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದಂತೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ರಕ್ಷಣಾ ವೇದಿಕೆ ಕಾರ್ಯಕರ್ತರ ಪಡೆ ಆಕ್ರೋಶ ವ್ಯಕ್ತಪಡಿಸಿದೆ.
₹50,000 ಪರಿಹಾರಕ್ಕೆ ಆಗ್ರಹ
ಈ ಕೂಡಲೇ ಸಂಶಿ ಹೋಬಳಿಯ ರೈತರಿಗೆ ಬೆಳೆ ವಿಮೆ ಸಂದಾಯವಾಗುವಂತೆ ತಹಶೀಲ್ದಾರ್ ಅವರು ಕೃಷಿ ಸಚಿವರ ಗಮನಕ್ಕೆ ತರಬೇಕು ಎಂದು ವೇದಿಕೆ ಆಗ್ರಹಿಸಿದೆ. ಅಲ್ಲದೆ, ಬೆಳೆ ಕಳೆದುಕೊಂಡ ಎಲ್ಲಾ ರೈತರಿಗೂ ಪ್ರತಿ ಹೆಕ್ಟೇರ್‌ಗೆ ₹50,000 ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣೆ, ರವಿ ಶಿರಸಂಗಿ, ಅಡಿವೆಪ್ಪ ಹೆಬಸೂರ, ಮಂಜುನಾಥ್ ಹಾದಿಮನಿ, ಅಶೋಕ್ ಸಂಶಿ, ಅಡಿವೇಪ್ಪ ತಳವಾರ, ಲಿಂಗರಾಜ್ ಕುಬಿಹಾಳ, ನೂರಸಾಬ ನಧಾಪ, ಮಂಜು ಪೂಜಾರ್, ಬಸುರಾಜ್ ಮುಳ್ಳಳ್ಳಿ, ಮಂಜು ಮೇಲ್ಮಾಳಗಿ, ಶಿವು ತಮ್ಮಣವರ್, ಸಿದ್ದು ಕೊಟ್ರೆನವರ್, ಸೇರಿದಂತೆ ಇತರರು ಇದ್ದರು.

