
ರೈತರ ಪರ ಹೋರಾಟ ಮಾಡಬೇಡಿ; ಮಾಡಿದರೆ ಪ್ರಾಣ ಕಳೆದುಕೊಳ್ಳುತ್ತೀರಿ – ರಘುನಾಥ ನಡುವಿನಮನಿಗೆ ಜೀವ ಬೆದರಿಕೆ ಪತ್ರ!
ನವಲಗುಂದ: ರೈತರ ಪರವಾಗಿ ಹೋರಾಟ ಮಾಡಬಾರದು, ಮಾಡಿದರೆ ಪ್ರಾಣ ಕಳೆದುಕೊಳ್ಳುತ್ತೀರಿ, ಕೈಕಾಲು ಮುರಿದರೆ ನಾವು ಜವಾಬ್ದಾರರಲ್ಲ” ಎಂದು ಹೇಳಿರುವ ಜೀವ ಬೆದರಿಕೆಯ ಪತ್ರವೊಂದು ಬಂದಿದೆ ಎಂದು ಹೋರಾಟಗಾರ ರಘುನಾಥ ನಡುವಿನಮನಿ ಹೇಳಿದ್ದಾರೆ.
ಪಟ್ಟಣದ ಅಣ್ಣಿಗೇರಿ ರಸ್ತೆಯ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನನಗೆ ಹಾಗೂ ಇನ್ನೊಬ್ಬ ಹೋರಾಟಗಾರ ಶಂಕ್ರಪ್ಪ ರುದ್ರಪ್ಪ ಅಂಬಲಿಗೆ ಅಕ್ಟೋಬರ್ 3 ರಂದು ಅಳಗವಾಡಿಯಲ್ಲಿರುವ ನನ್ನ ಮನೆಯಲ್ಲಿ ಈ ಪತ್ರ ತಲುಪಿದೆ. ಈ ಕುರಿತು ಅಕ್ಟೋಬರ್ 8ರಂದು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಅವರು ಮುಂದುವರೆದು, “ನಾನು ರೈತರ ಹೋರಾಟದಲ್ಲಿ ಒಬ್ಬ ಸೈನಿಕನಾಗಿ ಹೋರಾಟ ಮಾಡುತ್ತಿದ್ದೇನೆ. ರೈತರ ಹಿತದೃಷ್ಟಿಯಿಂದ ಕಂಪನಿಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಬೆದರಿಕೆ ಪತ್ರಗಳಿಂದ ನಾವು ಹೆದರಲಿಲ್ಲ. ಮಹದಾಯಿ, ಕಳಸಾ-ಬಂಡೂರಿ ಹಾಗೂ ರೈತರ ಹಕ್ಕಿನ ವಿಚಾರದಲ್ಲಿ ನನ್ನ ಹೋರಾಟ ನಿರಂತರ ಮುಂದುವರಿಯುತ್ತದೆ” ಎಂದು ದೃಢವಾಗಿ ಹೇಳಿದರು.
ನಂತರ ಮಾತನಾಡಿದ ಕಳಸಾ-ಬಂಡೂರಿ ಮಹದಾಯಿ ರೈತ ಹೋರಾಟ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಅವರು, “ಇದು ನಮ್ಮ ಹೋರಾಟವನ್ನು ಕುಂಠಿತಗೊಳಿಸಲು ರಾಜಕೀಯ ಶಕ್ತಿಗಳು ಮಾಡಿರುವ ಕುತಂತ್ರ. ಇದಕ್ಕೆ ನಾವು ಜಗ್ಗುವುದಿಲ್ಲ. ನಿಮಗೆ ಶಕ್ತಿ ಇದ್ದರೆ ನಮ್ಮ ಜೀವ ತೆಗೆಯಿರಿ! 2015ರಿಂದಲೇ ನಮ್ಮ ಹೋರಾಟವನ್ನು ತಡೆಹಿಡಿಯುವ ಪ್ರಯತ್ನ ನಡೆಯುತ್ತಿದೆಯಾದರೂ ನಾವು ಹಿಂಜರಿಯಿಲ್ಲ. ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಅವರು ಮತ್ತಷ್ಟು ಎಚ್ಚರಿಕೆ ನೀಡುತ್ತಾ, “ಯಾವುದೇ ರೀತಿಯ ಬೆದರಿಕೆಗಳಿಗೂ ನಾವು ಹೆದರದೇ, ಇನ್ನು ಉಗ್ರ ಹೋರಾಟ ಆರಂಭಿಸುತ್ತೇವೆ” ಎಂದರು.
ಈ ಸಂದರ್ಭದಲ್ಲಿ ಪಕ್ಕೀರಗೌಡ ವೆಂಕಣಗೌಡ, ಬಸವರಾಜ ಓಲೇಕಾರ, ಸಿದ್ದಪ್ಪ ತುಳಸಿಗೇರಿ, ವೀರಯ್ಯ ಹಿರೇಮಠ, ಬಸವಂತಪ್ಪ ಹಡಪದ, ದೇವೇಂದ್ರಪ್ಪ ಗುಡಿಸಾಗರ, ನಿಂಗಪ್ಪ ಬಡಿಗೇರ ಹಾಗೂ ಶಿವಾನಂದ ಚಿಕ್ಕನರಗುಂದ ಉಪಸ್ಥಿತರಿದ್ದರು.

