ಕಥೆಗಳು ಸಮುದಾಯ ಒಗ್ಗೂಡಿಸುವ ಶಕ್ತಿ ಹೊಂದಿವೆ: ಡಾ. ರಾಜೇಂದ್ರ ಚೆನ್ನಿ

Spread the love

ಕಥನ ಪರಂಪರೆಯಲ್ಲಿ ವ್ಯಕ್ತಿ ಮತ್ತು ಸಮಾಜ ಕುರಿತು ಧಾರವಾಡದಲ್ಲಿ ಉಪನ್ಯಾಸ

ಧಾರವಾಡ: ಕಥೆಗಳು ಸಮುದಾಯವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದ್ದು, ಸಾಮಾಜಿಕ ಮೌಲ್ಯಗಳ ಆಳವಾದ ಒಳನೋಟಗಳನ್ನು ನೀಡುತ್ತವೆ ಎಂದು ಶಿವಮೊಗ್ಗದ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

​ಕರ್ನಾಟಕ ವಿದ್ಯಾವರ್ಧಕ ಸಂಘವು, ಎಂ.ಟಿ., ಎ.ಟಿ., ಬಿ.ಟಿ., ಮತ್ತು ಎಚ್.ಟಿ. ಸಾಸನೂರ ಸಹೋದರರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮಾಲಿಕೆ-27ರಲ್ಲಿ ‘ಕನ್ನಡ ಕಥನ ಪರಂಪರೆಯಲ್ಲಿ ವ್ಯಕ್ತಿ ಹಾಗೂ ಸಮಾಜ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಕಥೆಗಳಲ್ಲಿ ಧರ್ಮ, ಕುಟುಂಬ ವ್ಯವಸ್ಥೆಯ ಪ್ರಶ್ನೆ

​ಕಥನ ಪರಂಪರೆಯಲ್ಲಿ ಧರ್ಮ, ಕುಟುಂಬ ವ್ಯವಸ್ಥೆ ಹಾಗೂ ಪ್ರಭುತ್ವದ ಕುರಿತು ಪ್ರಶ್ನೆ ಮಾಡುವ ಸಂದರ್ಭಗಳನ್ನು ಕಾಣಬಹುದು. ಕಥೆಗಳಿಗೆ ಚಲನಶೀಲ ಗುಣವಿದ್ದು, ಕ್ಷಣಕ್ಷಣಕ್ಕೂ ತನ್ನ ರೂಪ, ಶೈಲಿ ಮತ್ತು ಸ್ವರೂಪವನ್ನು ಬದಲಿಸುವ ಗುಣ ಹೊಂದಿವೆ. ಕೆಲವು ಸಂದರ್ಭಗಳಲ್ಲಿ ವಿಮರ್ಶೆಗೂ ಒಳಗಾಗಿವೆ ಎಂದು ಡಾ. ಚೆನ್ನಿ ವಿವರಿಸಿದರು.

​ಕಥೆಗಳಲ್ಲಿ ಸಮುದಾಯದ ಸಂಘರ್ಷ, ವಸಾಹತುಶಾಹಿ ಆಳ್ವಿಕೆ, ಸಾಮಾಜಿಕ ನ್ಯಾಯ ಪರಿಪಾಲನೆ, ಮತ್ತು ಊಳಿಗಮಾನ್ಯ (ಫ್ಯೂಡಲ್) ವ್ಯವಸ್ಥೆಯ ಬಗ್ಗೆ ಒಪ್ಪಿಕೊಳ್ಳುವ ಹಾಗೂ ತಿರಸ್ಕರಿಸುವ ಉಲ್ಲೇಖಗಳಿವೆ. ಕುವೆಂಪು, ಗಳಗನಾಥ ಹಾಗೂ ಮಾಸ್ತಿಯವರ ಕಥೆಗಳಲ್ಲೂ ವಿಭಿನ್ನತೆ ಇರುವುದನ್ನು ಕಾಣಬಹುದು. ಕಥೆಗಳು ನಮ್ಮ ಜೀವನದ ಮಾರ್ಗದರ್ಶನದಂತಿವೆ ಎಂದು ಅವರು ಹೇಳಿದರು.

ಎಂ.ಟಿ. ಸಾಸನೂರ ಮೌಲ್ಯಾಧಾರಿತ ಜೀವನಕ್ಕೆ ಮೆಚ್ಚುಗೆ

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶಾಂತಿನಾಥ ದಿಬ್ಬದ ಅವರು ಮಾತನಾಡಿ, ಎಂ.ಟಿ. ಸಾಸನೂರ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮೌಲ್ಯಾಧಾರಿತವಾದ ಜೀವನ ನಡೆಸಿ, ವೃತ್ತಿಯಲ್ಲಿ ಬದ್ಧತೆ ಹೊಂದಿದ್ದರು. ಅವರು ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿ ತಮ್ಮ ವಿದ್ಯಾರ್ಥಿಗಳಿಗೆ ಮತ್ತು ತಮ್ಮ ಮೂವರು ಸಹೋದರರಿಗೆ ಗುಣಮಟ್ಟದ ಶಿಕ್ಷಣ ನೀಡಿದರು. ಕೊಠಾರಿ ಆಯೋಗದ ಹೇಳಿಕೆಯಂತೆ, ಅವರು ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

​ಡಾ. ರಾಜೇಂದ್ರ ಚೆನ್ನಿ ಅವರ ಉಪನ್ಯಾಸವು ಚಿಂತನಶೀಲವಾಗಿತ್ತು. ಸಂಘರ್ಷಗಳು ಅಂದೂ ಇದ್ದವು, ಇಂದೂ ಇವೆ. ಬಸವಾದಿ ಶರಣರು ಪ್ರಶ್ನೆ ಮಾಡುವ ಮೂಲಕ ವ್ಯಕ್ತಿ ಹಾಗೂ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದು ಡಾ. ದಿಬ್ಬದ ತಿಳಿಸಿದರು.

Leave a Reply

Your email address will not be published. Required fields are marked *