
ಹಾವೇರಿ: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮತ್ತು ದಬ್ಬಾಳಿಕೆಗೆ ಬೇಸತ್ತ ನೊಂದ ಜನರು, ಅವುಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಗುರುವಾರ ಸಂಸದ ಬಸವರಾಜ ಬೊಮ್ಮಾಯಿ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹಾವೇರಿಯ ತಾಲ್ಲೂಕು ಪಂಚಾಯತ್ ಆವರಣದಲ್ಲಿರುವ ಸಂಸದರ ಕಚೇರಿ ಮುಂದೆ ಪ್ರತಿಭಟನಕಾರರು ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೀದಿಗೆ ಬಂದ ಬಡ ಮಹಿಳೆಯರು
ಪ್ರತಿಭಟನಕಾರರು ಮಾತನಾಡಿ, “ಜಿಲ್ಲೆಯಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಹಾವಳಿ ವಿಪರೀತವಾಗಿದೆ. ಬಡ ಮತ್ತು ಗ್ರಾಮೀಣ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸುಲಭವಾಗಿ ಸಾಲ ನೀಡಿ, ನಂತರ ಅದರ ವಸೂಲಿಗಾಗಿ ಕಿರುಕುಳ ನೀಡುತ್ತಿದ್ದಾರೆ. ಈ ದಬ್ಬಾಳಿಕೆಯಿಂದ ಅನೇಕ ಕುಟುಂಬಗಳು ತಮ್ಮ ಊರುಗಳನ್ನು ತೊರೆದು ಹೋಗುವ ಪರಿಸ್ಥಿತಿ ಬಂದಿದೆ” ಎಂದು ಅಳಲು ತೋಡಿಕೊಂಡರು. “ಫೈನಾನ್ಸ್ ಕಂಪನಿಗಳವರು ಮನೆಗಳಿಗೆ ಹೋಗಿ ಗುಂಡಾಗಿರಿ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕೂಡಲೇ ಈ ಫೈನಾನ್ಸ್ ಕಂಪನಿಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು, ಹಾಗೂ ಸಾಲಗಾರರಿಗೆ ರಕ್ಷಣೆ ನೀಡಿ ಗೌರವಯುತ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮನವಿ
ರಾಷ್ಟ್ರೀಕೃತ ಬ್ಯಾಂಕುಗಳಿಂದ ಸುಲಭವಾಗಿ ಸಾಲ ಸಿಗದ ಕಾರಣ ಬಡವರು ಮೈಕ್ರೋ ಫೈನಾನ್ಸ್ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ, ಕೇಂದ್ರ ಸರ್ಕಾರವು ಮೈಕ್ರೋ ಫೈನಾನ್ಸ್ ಸಾಲ ಹಾಗೂ ರೈತರ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಈ ಕುರಿತು ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು. ಪ್ರತಿಭಟನೆ ನಂತರ, ಪ್ರತಿಭಟನಕಾರರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಂಸದರ ಕಚೇರಿ ಸಿಬ್ಬಂದಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹನುಮಂತಪ್ಪ ಕಬ್ಬಾರ, ರಾಜಶೇಖರ ದೂದಿಹಳ್ಳಿ, ಮಹೇಶ ಕೊಟ್ಟೂರ ಮತ್ತು ಹನುಮಂತಪ್ಪ ದೀವಗಿಹಳ್ಳಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

