ಧಾರವಾಡ: ಕಲೆ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಮಾಧ್ಯಮ: ಪ್ರಭು ಹರಸೂರ

Spread the love

ಧಾರವಾಡ: ಕಲೆ ಮಾನವನ ಮನಸ್ಸಿಗೆ ಉಲ್ಲಾಸ ಹಾಗೂ ನೆಮ್ಮದಿ ನೀಡುವ ಶಕ್ತಿಯುಳ್ಳ ಮಾಧ್ಯಮ. ಚಿತ್ರಕಲೆಯಲ್ಲಿ ಸೌಂದರ್ಯಾನುಭೂತಿ ಮೂಡಿಸುವ ವಿಶೇಷ ಶಕ್ತಿ ಇದೆ ಎಂದು ಹಿರಿಯ ಚಿತ್ರಕಲಾವಿದ ಪ್ರಭು ಹರಸೂರ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಬಿ. ಮಾರುತ್ತಿ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಚಿತ್ತಾರ ಚೇತನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಸಂಗೀತ, ಸಾಹಿತ್ಯ, ಚಿತ್ರಕಲೆಯಂತಹ ಯಾವುದೇ ಕ್ಷೇತ್ರವಿರಲಿ, ಅಲ್ಲಿ ನಂಬಿಕೆ, ವಿಶ್ವಾಸ ಹಾಗೂ ಬದ್ಧತೆ ಅತ್ಯಂತ ಮುಖ್ಯ. ಕಲೆಯನ್ನು ಕೇವಲ ಒಂದು ವೃತ್ತಿಯಂತೆ ನೋಡದೆ, ಅದನ್ನೊಂದು ತಪಸ್ಸಿನಂತೆ ಕಾಣಬೇಕು ಎಂದು ಹರಸೂರ ಸಲಹೆ ನೀಡಿದರು.

ದಕ್ಷಿಣ ಕರ್ನಾಟಕದ ಕಲಾವಿದರಿಗೆ ದೊರೆಯುವಷ್ಟು ಪ್ರೋತ್ಸಾಹ ಮತ್ತು ಅವಕಾಶಗಳು ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗೆ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿಶೇಷ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಬೇಕಿದೆ ಎಂದು ಅವರು ಆಗ್ರಹಿಸಿದರು.

ಯುವ ಕಲಾವಿದ ಬಸವರಾಜ ತಳವಾರ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಬಿ. ಮಾರುತಿ ಅವರ ಕಾರ್ಯ ಶ್ಲಾಘನೀಯ ಎಂದರು.
ಸೃಜನಾತ್ಮಕತೆಗೆ ಪ್ರಬಲ ಮಾಧ್ಯಮ
ಧಾರವಾಡ ಆಕಾಶವಾಣಿ ನಿಲಯದ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಮಾತನಾಡಿ, ಚಿತ್ರಕಲೆ ಸೃಜನಾತ್ಮಕತೆ ಮತ್ತು ಕಲ್ಪನಾಶಕ್ತಿಯನ್ನು ವೃದ್ಧಿಸುವ ಪ್ರಬಲ ಮಾಧ್ಯಮವಾಗಿದೆ. ಪಾಲಕರು ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೆ, ಅವರ ಆಲೋಚನೆ ಮತ್ತು ಅನುಭವಗಳನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಕಲೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಬಸವರಾಜ ತಳವಾರ ಅವರ ಜಲವರ್ಣ ಚಿತ್ರಗಳು ಮನಮೋಹಕವಾಗಿದ್ದು, ಪ್ರತಿಯೊಂದು ಚಿತ್ರವೂ ಸಂದೇಶ ಸಾರುವಂತಿವೆ ಎಂದು ಪ್ರಶಂಸಿಸಿದರು.

ಬಸವರಾಜ ತಳವಾರ ಅವರಿಗೆ ಪ್ರಶಸ್ತಿ
‘ಚಿತ್ತಾರ ಚೇತನ’ ಪ್ರಶಸ್ತಿ ಪುರಸ್ಕೃತರಾದ ಯುವ ಚಿತ್ರಕಲಾವಿದ ಬಸವರಾಜ ತಳವಾರ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಲಾವಿದ ಬಿ. ಮಾರುತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದತ್ತಿದಾನಿ ದೀಪಕ ಮಾರುತಿ ಬಿ. ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಕಲಾವಿದರ ಶ್ರಮ ಮತ್ತು ಪ್ರತಿಭೆಯನ್ನು ಗುರುತಿಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಪ್ರೇರಣೆ ನೀಡುತ್ತವೆ ಎಂದರು.

ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ಈ ಸಂದರ್ಭದಲ್ಲಿ ಡಾ. ಸಂಜೀವ ಕುಲಕರ್ಣಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಪ್ರೊ. ಶಶಿಧರ ತೋಡಕರ, ಡಾ. ಧನವಂತ ಹಾಜವಗೋಳ, ಎಸ್.ಕೆ. ಪತ್ತಾರ, ಚಿತ್ರಕಲಾ ವಿದ್ಯಾರ್ಥಿಗಳು ಹಾಗೂ ಮುಗದ ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *