ಮುರಳಿ ಸಾವಜಿ ಹೋಟೆಲ್‌ ಮೇಲೆ ಅಬಕಾರಿ ದಾಳಿ, ಅಕ್ರಮ ಮದ್ಯ ವಶ: ಶಾಸಕರ ಕ್ಷೇತ್ರದಲ್ಲಿ ಕಳ್ಳ ದಂಧೆಗೆ ಆಕ್ರೋಶ

Spread the love

ನವಲಗುಂದ: ಪಟ್ಟಣದಲ್ಲಿರುವ ‘ಮುರಳಿ ಸಾವಜಿ ಹೋಟೆಲ್’ ಮತ್ತು ಅದರ ಮಾಲೀಕ ರಾಜು ದೊಂಗಡಿ ಅವರ ಮನೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ವಿವಿಧ ಬ್ರಾಂಡ್‌ಗಳ ಅಕ್ರಮ ಮದ್ಯ ಮತ್ತು ಬೀರ್ ವಶಪಡಿಸಿಕೊಂಡಿದ್ದಾರೆ. ಈ ಘಟನೆ ಶಾಸಕ ಎನ್.ಎಚ್. ಕೊನರಡ್ಡಿ ಅವರ ಕ್ಷೇತ್ರದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ದಾಳಿ ವೇಳೆ ಒಟ್ಟು ₹18,955 ಮೌಲ್ಯದ ಮದ್ಯ ಮತ್ತು ₹960 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ದಂಧೆಯಿಂದ ಸಾರ್ವಜನಿಕರ ಜೀವನಕ್ಕೆ ಕುತ್ತು
ಇಂತಹ ಅಕ್ರಮ ಮದ್ಯ ಮಾರಾಟದಿಂದಾಗಿ ಗ್ರಾಮೀಣ ಮತ್ತು ಬಡ ವರ್ಗದವರು ವ್ಯಸನಕ್ಕೆ ಬಲಿಯಾಗುತ್ತಿದ್ದು, ಇದರಿಂದ ಬಡ ಕುಟುಂಬಗಳ ಆರ್ಥಿಕ ಸ್ಥಿತಿಯೂ ಹದಗೆಡುತ್ತಿದೆ. ಕುಡಿತದ ಚಟಕ್ಕೆ ಬಿದ್ದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿ ಹಣ ವ್ಯಯ ಮಾಡುತ್ತಿರುವುದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಈ ಕಳ್ಳ ದಂಧೆಗಳಿಂದಾಗಿ ಶಾಂತಿ ಮತ್ತು ನೆಮ್ಮದಿ ಹಾಳಾಗುತ್ತಿದ್ದು, ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ದಾಳಿಯಲ್ಲಿ ನವಲಗುಂದ ವಲಯ ಅಬಕಾರಿ ನಿರೀಕ್ಷಕ ಗೀತಾ ತೆಗ್ಯಾಳ, ವೈ.ಟಿ. ಪೂಜಾರ, ಪುಷ್ಪಾ ನಿಲ್ಲಪ್ಪಗೌಡ್ರ, ಸಂಜಯ ಯಲಿಗಾರ ಮತ್ತು ವಸಂತಕುಮಾರ ಭಜಂತ್ರಿ ಅವರು ಭಾಗವಹಿಸಿದ್ದರು.

ಈ ಘಟನೆಯು ಶಾಸಕರ ಕ್ಷೇತ್ರದ ಮೇಲೆ ಕಪ್ಪು ಚುಕ್ಕೆಯಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *