
ಧಾರವಾಡ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿಗಳ ನೇಮಕಾತಿ ಪ್ರಕ್ರಿಯೆಗೆ ದೀಪಾವಳಿ ಸಂದರ್ಭದಲ್ಲಿ ತೆರೆ ಬಿದ್ದಿದ್ದು, ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ನಿಷ್ಠಾವಂತ ಕಾರ್ಯಕರ್ತರಿಗೆ ವಿವಿಧ ನಿಗಮ-ಮಂಡಳಿಗಳಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ. ಈ ನೇಮಕಾತಿಯಿಂದ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ.
ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಸುರೇಶ ಸವಣೂರ ಅವರಿಗೆ ಹುಬ್ಬಳ್ಳಿ-ಧಾರವಾಡ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯ ನಿರ್ದೇಶಕ ಸ್ಥಾನ ಒಲಿದು ಬಂದಿದೆ. ಪಕ್ಷ ಸಂಘಟನೆ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಇದೀಗ ನಿಗಮ-ಮಂಡಳಿಯಲ್ಲಿ ಜವಾಬ್ದಾರಿ ನೀಡಿರುವುದು ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಇದೇ ರೀತಿ ಧಾರವಾಡ-71 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಪರಮೇಶ್ವರ ಕಾಳೆ ಅವರನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಹಾರೋಬೆಳವಡಿ ಗ್ರಾಮದ ಈಶ್ವರ ಶಿವಳ್ಳಿ ಅವರಿಗೂ ಹೆಸ್ಕಾಂ ನಿರ್ದೇಶಕ ಸ್ಥಾನ ಒಲಿದಿದೆ.

ಹೆಸ್ಕಾಂಗೆ ಒಟ್ಟು ಐವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಮೋಹನ್ ಬಿ. ರೆಡ್ಡಿ, ಶ್ಯಾಮರಾವ್ ರಾಜಾರಾಮ್ ರೇವಾಡೆ, ಈಶ್ವರ ಶಿವಳ್ಳಿ, ಗೀತಾ ಪೂಜಾ ಹಾಗೂ ಸುರೇಶ ಸವಣೂರ ಇಂಗ್ಲಿ ಅವರು ಸ್ಥಾನ ಪಡೆದಿದ್ದಾರೆ.
ಬಹುದಿನಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂಬ ಬೇಡಿಕೆಗೆ ಈ ನೇಮಕಾತಿ ಮೂಲಕ ಸ್ಪಂದನೆ ದೊರೆತಂತಾಗಿದೆ. ಜಿಲ್ಲೆಯ ವಿವಿಧ ಭಾಗಗಳ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿರುವುದು ಪಕ್ಷದ ಸಂಘಟನೆಯಲ್ಲಿ ಹೊಸ ಚೈತನ್ಯ ಮೂಡಿಸುವ ನಿರೀಕ್ಷೆ ಮೂಡಿಸಿದೆ. ನವಲಗುಂದ ಭಾಗದ ಶ್ಯಾಮರಾವ್ ರಾಜಾರಾಮ್ ರೇವಾಡೆ ಅವರಿಗೂ ಹೆಸ್ಕಾಂ ಸದಸ್ಯ ಸ್ಥಾನ ಒಲಿದಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಈ ನೇಮಕಾತಿಗಳು ಗಮನ ಸೆಳೆದಿವೆ.
